ಕೊಡಗಿನ ಮಳೆ ಎಂದರೆ ಕೇವಲ ಪ್ರಕೃತಿಯ ಸೌಂದರ್ಯವಲ್ಲ; ಅದು ಅಲ್ಲಿನ ಜನರ ಬದುಕು, ಕೃಷಿ, ಆಹಾರ ಪದ್ಧತಿ ಮತ್ತು ಸಂಸ್ಕೃತಿಯೊAದಿಗೆ ಬೆಸೆದುಕೊಂಡಿರುವ ಜೀವನ ಶೈಲಿ. ಮಳೆಗಾಲ ಆರಂಭವಾಗುತ್ತಿದ್ದAತೆ ಪಶ್ಚಿಮಘಟ್ಟಗಳ ಮಡಿಲಿನ ಕೊಡಗಿನ ಬೆಟ್ಟ-ಗುಡ್ಡಗಳು ಹಸಿರು ಹೊದಿಕೆ ಹೊದ್ದು ನಿಂತುಕೊಳ್ಳುತ್ತವೆ. ಕಾಫಿ ತೋಟಗಳು, ಭತ್ತದ ಗದ್ದೆಗಳು ಮತ್ತು ಕಾಡುಗಳು ಹೊಸ ಚೈತನ್ಯದಿಂದ ಕಂಗೊಳಿಸುತ್ತವೆ.
ಕೊಡಗಿನ ಜನರಿಗೆ ಮಳೆ ಬದುಕಿನ ಆಧಾರ. ಮಳೆ ಯೊಂದಿಗೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ರೈತರು ಕೆಸರು, ಚಳಿ ಮತ್ತು ನಿರಂತರ ಮಳೆಯ ನಡುವೆಯೂ ತಮ್ಮ ಕೃಷಿ ಕಾರ್ಯಗಳಲ್ಲಿ ತೊಡಗುತ್ತಾರೆ. ಈ ಮಳೆಗಾಲದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಹಿರಿಯರು ರೂಪಿಸಿಕೊಂಡ ಆಹಾರ ಪದ್ಧತಿಗಳಲ್ಲಿ ಕಕ್ಕಡ ಹದಿನೆಂಟು ವಿಶೇಷ ಸ್ಥಾನ ಪಡೆದಿದೆ.
ಕಕ್ಕಡ ತಿಂಗಳು ಅತ್ಯಂತ ಮಹತ್ವದ್ದಾಗಿದೆ. ಈ ಸಮಯದಲ್ಲಿ ಮಳೆ ತನ್ನ ತೀವ್ರತೆಯನ್ನು ಹೊಂದಿರುತ್ತದೆ. ದೇಹಕ್ಕೆ ಶಕ್ತಿ, ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ನೀಡುವ ಆಹಾರ ಸೇವಿಸುವ ಪದ್ಧತಿ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಪ್ರಕೃತಿಯಲ್ಲಿರುವ ಸಂಪತ್ತನ್ನು ಬಳಸಿಕೊಂಡು ಆರೋಗ್ಯಕರ ಬದುಕು ನಡೆಸಿದ ನಮ್ಮ ಪೂರ್ವಜರ ಜ್ಞಾನವೇ ಕಕ್ಕಡ ಹದಿನೆಂಟರ ಆಚರಣೆಯ ಮೂಲವಾಗಿದೆ.
ಜನಪದ ನಂಬಿಕೆಯ ಪ್ರಕಾರ ಕಕ್ಕಡ ತಿಂಗಳ ಹದಿನೆಂಟನೇ ದಿನ ಕಾಡಿನಲ್ಲಿ ಬೆಳೆಯುವ ಮದ್ದ್ (ಆಟಿ) ಸೊಪ್ಪು ವಿಶೇಷ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಈ ದಿನ ಸೊಪ್ಪಿನಲ್ಲಿ ಹದಿನೆಂಟು ಬಗೆಯ ಔಷಧೀಯ ಶಕ್ತಿಗಳು ಸೇರಿರುತ್ತವೆ ಎಂಬ ನಂಬಿಕೆಯಿAದಲೇ ಇದಕ್ಕೆ "ಕಕ್ಕಡ ಹದಿನೆಂಟು" ಆಟಿ ಹದಿನೆಂಟು ಎಂಬ ಹೆಸರು ಬಂದಿದೆ. ಈ ನಂಬಿಕೆಯ ಹಿಂದೆ ಪ್ರಕೃತಿ ಯೊಂದಿಗೆ ಹೊಂದಾಣಿಕೆಯಿAದ ಬದುಕಿದ ಜನಪದ ಜ್ಞಾನ ಅಡಗಿದೆ.
ಬೆಳಗಿನ ಜಾವ ಕುಟುಂಬದವರು ಕಾಡಿಗೆ ತೆರಳಿ ಮದ್ದ್ ಸೊಪ್ಪನ್ನು ಸಂಗ್ರಹಿಸಿ ಮನೆಗೆ ತರುತ್ತಾರೆ. ಸೊಪ್ಪನ್ನು ಶುಚಿಗೊಳಿಸಿ ಅದರ ರಸವನ್ನು ತೆಗೆದು ಅಕ್ಕಿ, ಬೆಲ್ಲ, ತೆಂಗು, ತುಪ್ಪ, ಏಲಕ್ಕಿ, ಲವಂಗ ಮೊದಲಾದ ಪದಾರ್ಥಗಳನ್ನು ಸೇರಿಸಿ ಸುವಾಸನೆಯ ಪಾಯಸ ತಯಾರಿಸಲಾಗುತ್ತದೆ.
ಸಂಜೆ ವೇಳೆಯಲ್ಲಿ ಈ ಪಾಯಸವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಸೇವಿಸುತ್ತಾರೆ. ಇದು ಕೇವಲ ಆಹಾರ ಸೇವನೆಯಲ್ಲ; ಕುಟುಂಬದ ಒಗ್ಗಟ್ಟು, ಹಿರಿಯರ ಸಂಪ್ರದಾಯದ ಗೌರವ ಮತ್ತು ಆರೋಗ್ಯಕರ ಬದುಕಿನ ಸಂಕೇತವಾಗಿದೆ.
ಕಕ್ಕಡ ಹದಿನೆಂಟು ಎಂದರೆ ಕೇವಲ ಆಟಿ ಪಾಯಸಕ್ಕೆ ಸೀಮಿತವಲ್ಲ. ಮಳೆಗಾಲದಲ್ಲಿ ದೊರೆಯುವ ಅಣಬೆ ಬಿದಿರಿನ ಚಿಗುರಿನ ಕಣಿಲೆ, ನಾಟಿ ಕೋಳಿ, ತೊರೆಗಳಲ್ಲಿ ಸಿಗುವ ಸಣ್ಣ ಮೀನು, ಏಡಿ ಹಾಗೂ ವಿವಿಧ ಆಹಾರವನ್ನು ತಯಾರಿಸಿ ಸೇವಿಸುವ ಪದ್ಧತಿಯೂ ಇದರ ಭಾಗವಾಗಿದೆ. ಋತುವಿಗೆ ತಕ್ಕ ಆಹಾರ ಸೇವಿಸುವ ಮೂಲಕ ದೇಹವನ್ನು ಆರೋಗ್ಯ ವಾಗಿಟ್ಟುಕೊಳ್ಳುವ ಜ್ಞಾನವನ್ನು ಈ ಆಚರಣೆ ಸಾರುತ್ತದೆ.
ಕೊಡಗಿನ ಮಣ್ಣಿನ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಬAಧಕ್ಕೆ ವಿಶೇಷ ಸ್ಥಾನವಿದೆ.
ಕಾಡು, ಬೆಟ್ಟ, ನದಿ, ಮಳೆ ಮತ್ತು ಕೃಷಿಯನ್ನು ಗೌರವಿಸುವ ಜೀವನ ಪದ್ಧತಿ ಇಲ್ಲಿನ ಜನರ ವೈಶಿಷ್ಟö್ಯ. ಕಕ್ಕಡ ಹದಿನೆಂಟು ಈ ಪ್ರಕೃತಿ ಪ್ರೀತಿಯ ಪ್ರತೀಕವಾಗಿದೆ.
ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ಕಕ್ಕಡ ಹದಿನೆಂಟು ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಇಂದಿಗೂ ಸಂಪ್ರದಾಯದAತೆ ಆಟಿ ಸೊಪ್ಪನ್ನು ಸಂಗ್ರಹಿಸಿ ಆಚರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಮಾರುಕಟ್ಟೆಯಲ್ಲಿ ದೊರೆಯುವ ಸೊಪ್ಪಿನ ಮೂಲಕ ಈ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ.
ಕೊಡವ, ಗೌಡ ಸಮಾಜ ಹಾಗೂ ಇತರ ಸಂಘ- ಸಂಸ್ಥೆಗಳು ಕಕ್ಕಡ ಆಹಾರೋತ್ಸವ, ಸಾಂಪ್ರದಾಯಿಕ ಅಡುಗೆ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ತಲೆಮಾರಿಗೆ ಈ ಪರಂಪರೆಯನ್ನು ಪರಿಚಯಿಸುತ್ತಿವೆ.
ಕಕ್ಕಡ ಹದಿನೆಂಟು ಕೇವಲ ಒಂದು ಆಚರಣೆಯಲ್ಲ. ಅದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದ ನಮ್ಮ ಪೂರ್ವಜರ ಜೀವನಜ್ಞಾನ, ಆರೋಗ್ಯದ ಅರಿವು, ಕೃಷಿಯ ಮಹತ್ವ ಮತ್ತು ಕುಟುಂಬದ ಬಾಂಧವ್ಯವನ್ನು ಸಾರುವ ಅಪರೂಪದ ಸಾಂಸ್ಕೃತಿಕ ಪರಂಪರೆಯಾಗಿದೆ.
ಕೊಡಗಿನ ಮಳೆ, ಹಸಿರು ಕಾಡು, ಕಕ್ಕಡ ಸೊಪ್ಪಿನ ಮಹಿಮೆ ಮತ್ತು ಮಣ್ಣಿನ ಸೊಗಡಿನೊಂದಿಗೆ ಬೆಸೆದುಕೊಂಡಿರುವ ಕಕ್ಕಡ ಹದಿನೆಂಟು ಇಂದಿಗೂ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ಈ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಸಾಂಸ್ಕೃತಿಕ ಹೊಣೆಗಾರಿಕೆಯಾಗಿದೆ. ಕಕ್ಕಡ ಹದಿನೆಂಟರ ಆಚರಣೆ ನಿಮಗೆಲ್ಲ ಒಳಿತನ್ನು ಮಾಡಲಿ.
- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.