ಸಿದ್ದಾಪುರ, ಆ. ೨: ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಯುವಕ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂ ಡಿರುವ ದುರ್ಘಟನೆ ಚೆನ್ನಯ್ಯನಕೋಟೆ ಗ್ರಾಮದ ಹೊಲಮಾಳದಲ್ಲಿ ನಡೆದಿದೆ.
ಹೊಲಮಾಳ ನಿವಾಸಿ ಉಮ್ಮರ್ ಅವರ ಪುತ್ರ ನಿಯಾಸ್ ಮೃತ ದುರ್ದೈವಿ. ಭಾನುವಾರ ಬೆಳಿಗ್ಗೆ ನಿಯಾಸ್ ತನ್ನ ಸ್ನೇಹಿತ ಬಾರಿಸ್‌ನೊಂದಿಗೆ ಚೆನ್ನಯ್ಯನಕೋಟೆ ಮಸೀದಿಯ ತರಗತಿಗೆ ತೆರಳಿ, ಬಳಿಕ ಸ್ಕೂಟಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹೊಲಮಾಳ ಸಮೀಪ ವಾಹನದ ನಿಯಂತ್ರಣ ತಪ್ಪಿ ರಸ್ತೆಗೆ ಜಾರಿ ಬಿದ್ದಿದೆ ಎನ್ನಲಾಗಿದೆ. ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ನಿಯಾಸ್ ತಲೆಗೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬಾರಿಸ್‌ಗು ಕೂಡ ಗಾಯಗಳಾಗಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.