ಕುಶಾಲನಗರ, ಆ. ೨: ನದಿ ಜಲಮೂಲಗಳ ಪಾವಿತ್ರ್ಯತೆ ಕಲುಷಿತ ಗೊಳ್ಳುತ್ತಿರುವ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ.ಎಚ್ ನಜೀರ್ ಅಹ್ಮದ್ ಕರೆ ನೀಡಿದರು.
ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಮಾದಾಪಟ್ಟಣ ಪುಣ್ಯಕೋಟಿ ಗೋಶಾಲೆ ಸಹಯೋಗದೊಂದಿಗೆ ನಡೆದ ೧೮೮ನೆಯ ಕಾವೇರಿ ಆರತಿ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಲಮೂಲಗಳಿಗೆ ಪೂಜೆ ಸಲ್ಲಿಸುವ ಸಂದರ್ಭ ಅರ್ಚಕರು ಪುಷ್ಪಾರ್ಚನೆ ಮಾಡುತ್ತಿದ್ದರೆ ಇನ್ನೊಂದೆಡೆ ಪಟ್ಟಣ ಗ್ರಾಮಗಳಿಂದ ಕಲ್ಮಶ ತ್ಯಾಜ್ಯಗಳನ್ನು ನದಿಗೆ ಹರಿಸುತ್ತಿರುವುದು ಆತಂಕಮಯ ಬೆಳವಣಿಗೆ ಆಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಷ್ಟೆಲ್ಲಾ ಕಲುಷಿತ ನಡುವೆ ಹರಿಯುತ್ತಿರುವ ನದಿಯು ಮೌನವಾಗಿ ಹರಿಯುತ್ತಿದೆ. ಪ್ರತಿಯೊಬ್ಬರು ಆರಾಧಿಸುವ ಮೂಲಕ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಗುರುಪೂರ್ಣಿಮೆ ಅಂಗವಾಗಿ ಮಾತನಾಡಿದ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷರು ಮತ್ತು ಹಿರಿಯ ಶಿಕ್ಷಕರಾದ ಬಾಚರಣಿಯಂಡ ಪಿ ಅಪ್ಪಣ್ಣ, ಗುರುಗಳನ್ನು ಹುಡುಕಿಕೊಂಡು ದೂರದ ಬೆಟ್ಟಗಳಿಗೆ ಹೋಗುವ ಅಗತ್ಯವಿಲ್ಲ. ತಮ್ಮ ಗುರುಗಳನ್ನು ಗೌರವದಿಂದ ಕಂಡು ಗೌರವಿಸಿ ನಮಿಸುವುದು ಉತ್ತಮ ಸಂಸ್ಕಾರಯುತ ಕಾರ್ಯವಾಗಿದೆ ಎಂದರು. ಪ್ರಕೃತಿಯ ಆರಾಧನೆಯ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಕಾವೇರಿ ಆರತಿ ಬಳಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾತನಾಡಿದ ಪುಣ್ಯಕೋಟಿ ಗೋಶಾಲೆಯ ಪ್ರಮುಖರಾದ ಶ್ರೀನಿವಾಸ್, ತಮ್ಮ ಗೋಶಾಲೆಯಲ್ಲಿ ೭೦ಕ್ಕೂ ಅಧಿಕ ಗೋವುಗಳು ಇದ್ದು, ಬಹುತೇಕ ಅನಾಥ ಗೋವುಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು. ಕಾವೇರಿ ಮಹಾ ಆರತಿ ಮತ್ತು ಗುರು ಪೂರ್ಣಿಮಾ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಜೀವನದಿ ಕಾವೇರಿಗೆ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ಸಾಮೂಹಿಕವಾಗಿ ಆರತಿ ಬೆಳಗಿದರು.
ಗುರುಪೂರ್ಣಿಮೆ ಅಂಗವಾಗಿ ಹಿರಿಯರಾದ ಎಂ.ಎಚ್ ನಜೀರ್ ಅಹ್ಮದ್, ಬಾಚರಣಿಯಂಡ ಪಿ. ಅಪ್ಪಣ್ಣ, ಪ್ರಾಂಶುಪಾಲ ಡಾ. ದೇವರಾಜ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಮಾಮಿ ಕಾವೇರಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮಂಡೆಪAಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ಕರುಂಬಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠಲ ಸಾಲಿಯಾನ್, ಸುಧೀರ್ ಪುಣ್ಯಕೋಟಿ ಗೋಶಾಲೆಯ ಪ್ರಮುಖರಾದ ಅಜಿತ್ ಮೂಕಾಂಬಿಕಾ ದಂಪತಿ, ಕರ್ಕಳ್ಳಿ ಸುಭಾಷ್, ಮನು ರೈ, ಮೈಸ್ ಚಂದ್ರಶೇಖರ್, ಡಿ.ಸಿ. ಮಂಜುನಾಥ್, ಪ್ರದೀಪ್, ಜನಾರ್ಧನ್ ಮಧುಸೂಧನ್, ಸಮಾಜ ಕಲ್ಯಾಣ ಅಧಿಕಾರಿ ಮಧು ಮತ್ತಿತರರು ಇದ್ದರು.