ಐಗೂರು, ಜು. ೩೦: ಅರಣ್ಯ ಇಲಾಖೆಯ ಸೋಮವಾರಪೇಟೆ ವಲಯದ ಹುದುಗೂರು ಶಾಖೆಯ ವತಿಯಿಂದ ಯಡವನಾಡಿನ ಮಹರ್ಷಿ ವಾಲ್ಮೀಕಿ ವಸತಿ ಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

ಎರಡು ಶಾಲೆಗಳ ಆವರಣಗಳಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮಾತನಾಡಿ, ವನಮಹೋತ್ಸವವು ಪರಿಸರ ಸಂರಕ್ಷಣೆ ಮತ್ತು ಹಸಿರು ಸಂಪತ್ತಿನ ಮಹತ್ವವನ್ನು ಸಾರುವ ವಿಶೇಷ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರು ಕನಿಷ್ಟಪಕ್ಷ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪ್ರಕೃತಿ ಉಳಿಸಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ನಿರ್ಮಿಸಲು ಕೈಜೋಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಎಂ.ಬಿ., ಹುದುಗೂರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಮಂಜೇಗೌಡ ವಿ.ಎಸ್., ಗಸ್ತು ಪಡೆಯ ಅನಿಲ್ ಕುಮಾರ್ ಕೆ.ಬಿ., ಸತೀಶ್ ಕುಮಾರ್, ಅರಣ್ಯ ವೀಕ್ಷಕರಾದ ಅಯ್ಯಪ್ಪ, ಜೀವನ್, ಹರ್ಷಿತ್, ಪ್ರಜ್ವಲ್, ಆರ್‌ಆರ್‌ಟಿ ಸಿಬ್ಬಂದಿ ದಿವಾಕರ, ಶರತ್, ಶಾಲಾ ಮುಖ್ಯ ಶಿಕ್ಷಕರುಗಳಾದ ಬಸವರಾಜು, ರಜನಿಕಾಂತ್, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.