ಬೆಳಿಗ್ಗೆ ಪ್ರಕಟಗೊಂಡ ಸಚಿವರ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಳ್ ಎಸ್ ವೈದ್ಯ ಅವರ ಹೆಸರು ಸೇರಿತ್ತು. ಆದರೆ, ಅಧಿಕೃತವಾಗಿಯೇ ಬಿಡುಗಡೆಗೊಂಡ ಪಟ್ಟಿಯಲ್ಲಿದ್ದ ಇವರ ಹೆಸರು ಮತ್ತೆ ಮಾಯವಾಗಿ ಈ ಸ್ಥಾನಕ್ಕೆ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ಸೇರ್ಪಡೆಯಾಗಿದ್ದು, ಸಚಿವ ಸ್ಥಾನದ ಬಿಕ್ಕಟ್ಟಿಗೆ ಸಾಕ್ಷಿಯಾದಂತಿತ್ತು. ಆರಂಭದ ೨೦ ಹೆಸರಿನ ಪಟ್ಟಿಯಲ್ಲಿ ಏಕೈಕ ಮಹಿಳೆಯಾಗಿ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ, ಬಳಿಕ ಅದನ್ನು ತಡೆಹಿಡಿಯಲಾಯಿತು. ಈ ಒಂದು ಸ್ಥಾನ ಹೊರತುಪಡಿಸಿ ಉಳಿದ ೧೯ ಮಂದಿ ಪ್ರಮಾಣವಚನ ಸ್ವೀಕರಿಸಿದರು. ಇದರಿಂದಾಗಿ ಪಟ್ಟಿಯಲ್ಲಿದ್ದ ಏಕೈಕ ಮಹಿಳೆಯ ಪ್ರಾತಿನಿಧ್ಯಕ್ಕೂ ಕೊಕ್ ನೀಡಲಾಗಿದೆ.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ, ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಸಚಿವರುಗಳಾಗಿ ಆಯ್ಕೆಯಾಗಿದ್ದ ೧೨ ಮಂದಿ ಇವರಾಗಿದ್ದಾರೆ.

ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಆ ಸಂದರ್ಭದಲ್ಲಿ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು.