ಗೋಣಿಕೊಪ್ಪಲು, ಆ. ೮ : ಗ್ರಾಮದಲ್ಲಿ ಆಗಿಂದ್ದಾಗ್ಗೆ ಪುಂಡಾನೆ ಯೊಂದು ಜನರ ಎದುರಿಗೆ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತ ಗೊಂಡಿದ್ದಾರೆ. ಇದೇ ಕಾಡಾನೆ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಕೆಲವರಿಗೆ ಎದುರಾಗಿದ್ದು, ಶಾಂತ (೫೦) ಎಂಬ ಮಹಿಳೆಗೆ ತೀವ್ರ ಪೆಟ್ಟಾಗಿದ್ದು ಮಾನಂದವಾಡಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಗಡಿ ಭಾಗ ಕುಟ್ಟ ಸಮೀಪದ ತೈಲ ಗ್ರಾಮದಲ್ಲಿ ಮುಂಜಾನೆ ವೇಳೆ ಪುಂಡಾನೆ ಅಲ್ಲಿಯ ನಾಗರಿಕರಿಗೆ ಎದುರಾಗಿದೆ. ಕಾಡಾನೆ ಕಂಡು ಹಲವು ಮಂದಿ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಶಾಂತ ಎಂಬ ಮಹಿಳೆ ಆನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವೇಳೆ ಕಾಡಾನೆ ಶಾಂತಳನ್ನು ಘಾಸಿಗೊಳಿಸಿ ಮುಂದಕ್ಕೆ ತೆರಳಿದೆ. ಸ್ಥಳದಲ್ಲಿಯೇ ಕುಸಿದು ಬಿದ್ದ ಮಹಿಳೆಯನ್ನು ಕುಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೇರಳ ರಾಜ್ಯದ ಪೇಪಾಡಿಯ ವಿಮ್ಸ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ.

ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಕಾಡಾನೆ ನಾಡಿಗೆ ಬರುವುದನ್ನು ತಡೆಗಟ್ಟುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗ್ರಾಮದಲ್ಲಿ ನಿರಂತರ ಪುಂಡಾನೆಯ ಕಾಟ ಹೆಚ್ಚಾಗಿರುವುದರಿಂದ ತೊಂದರೆ ನೀಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ನಾಗರಿಕರು ಆಗ್ರಹಿಸಿದ್ದಾರೆ.