ಮಡಿಕೇರಿ, ಆ. ೮: ಹಿಂದೂ ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆಯನ್ನು ನಿವಾರಿಸಿಕೊಂಡು ಮನೆ ಮತ್ತು ದೇವಾಲಯಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಂಡು ಪರಸ್ಪರ ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವೆಲ್ಲ ಹಿಂದೂ ಎನಿಸಿಕೊಂಡಾಗ ಅಖಂಡ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಪ್ರಾಂತಗಳ ಪ್ರಚಾರ ಪ್ರಮುಖರಾದ ಅರುಣ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂ ಜಾಗರಣ ವೇದಿಕೆ ಮಡಿಕೇರಿ ತಾಲೂಕು ಸಮಿತಿ ವತಿಯಿಂದ ಮಡಿಕೇರಿ ನಗರದಲ್ಲಿ ನಡೆದ ಪಂಜಿನ ಮೆರವಣಿಗೆ ಮತ್ತು ಕಾವೇರಿ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಹಿಂದೂ ಸಮಾಜದ ಸ್ವಾರ್ಥ ಮತ್ತು ಒಡಕಿನ ಕಾರಣದಿಂದಾಗಿ ಭಾರತ ೫೨ ಲಕ್ಷ ಚದರ ಕಿಲೋಮೀಟರ್ ಭೂಭಾಗವನ್ನು ಕಳೆದುಕೊಂಡಿದೆ. ದೇಶದ ಒಳಗಡೆ ಮತಾಂತರ, ದೇಶ ವಿರೋಧಿ ಕೃತ್ಯಗಳು, ದೇಶವನ್ನು ಒಡೆಯುವ ಷಡ್ಯಂತ್ರಗಳು ನಡೆಯುತ್ತಿವೆ. ಚದರ ಅಡಿ ಭೂಮಿಯ ಬಗ್ಗೆಯೂ ಹಿಂದು ಸಮಾಜ ಚಿಂತನೆ ಮಾಡಬೇಕಾದ ಅಗತ್ಯವಿದೆ. ನಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಂಡಾಗ ಅಖಂಡ ಭಾರತ ನಿರ್ಮಾಣ ಸಾಕಾರಗೊಳ್ಳಲಿದೆ. ಇಡೀ ವಿಶ್ವದಲ್ಲಿಯೇ ಇಂದು ಯೋಗ ಶಿಬಿರ ಧ್ಯಾನ ಚಿಂತನಾ ಸಭೆಗಳು ನಡೆಯುತ್ತಿವೆ. ದ್ವೇಷದಿಂದ ಏನನ್ನು ಸಾಧಿಸಲಾಗದು, ದ್ವೇಷ ಇಟ್ಟುಕೊಂಡವರು ತನ್ನನ್ನು ತಾನೇ ಸುಟ್ಟುಕೊಳ್ಳುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇಂದು ನಮ್ಮ ವೇಷ, ಭಾಷೆ ಪಾಶ್ಚಿಮಾತ್ಯಕರಣಗೊಳ್ಳುತ್ತಿದ್ದು ಎಲ್ಲರೂ ಇಂಗ್ಲೀಷ್ ಭಾಷೆಯಲ್ಲಿ ಸಹಿ ಮಾಡುತ್ತಿದ್ದೇವೆ, ಮಾತೃಭಾಷೆಯಲ್ಲಿ ಸಹಿ ಮಾಡುವ ಸಾಧ್ಯತೆಯನ್ನು ಕಂಡುಕೊಳ್ಳಬೇಕು ಎಂದು ಹೇಳಿದರು. ಭಾರತದಲ್ಲಿ ವಿದೇಶಿ ಶಕ್ತಿಗಳು ಯುವ ಜನತೆಯನ್ನು ದಾರಿ ತಪ್ಪಿಸುವ ಷಡ್ಯಂತ್ರ ಮಾಡುತ್ತಿದ್ದು ಮುಂದಿನ ಪೀಳಿಗೆಯಲ್ಲಿ ಭಾರತದ ಅಖಂಡತೆಯ ಭಾವವನ್ನು ತುಂಬುವ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಮಾತನಾಡಿ ಭಾರತ ದೇಶವು ಇಂದು ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಈ ಹಿಂದೆ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ಭಾರತ ರಪ್ತು ಮಾಡಃವ ಸಾಮರ್ಥ್ಯವನ್ನು ಹೊಂದಿದೆ. ರಾಜಕೀಯ ಸುಸ್ಥಿರತೆಯನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಭಾರತದ ಒಳಗಡೆ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಹಿಂದೂ ಸಮಾಜ ಒಂದಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯವಾಗಲಿದೆ. ಹಿಂದುಗಳಿಗೆ ಇರುವುದು ಭಾರತ ಒಂದೇ ದೇಶ, ಭಾರತವನ್ನು ರಕ್ಷಣೆ ಮಾಡುವ ಸದ್ದುದೇಶದಿಂದ ಸರ್ವ ಹಿಂದುಗಳು ಒಂದಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಕುಕ್ಕೆರ, ಕೊಡಗು ಜಿಲ್ಲಾ ಸಹಸಂಯೋಜಕ ಶರತ್ ಪೆಮ್ಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಸಭಾ ಅಧ್ಯಕ್ಷೆ ಕಲಾವತಿ, ಸದಸ್ಯರಾದ ಅರುಣ್ ಶೆಟ್ಟಿ, ಸಬಿತ, ಪ್ರಮುಖರಾದ ಕೆ.ಕೆ ಮಹೇಶ್ ಕುಮಾರ್, ಕೆ.ಕೆ ದಿನೇಶ್, ಕುಮಾರ್ ಮೇಕೇರಿ ಇನ್ನಿತರರು ಇದ್ದರು ಸುಭಾಷ್ ಕತ್ತಲೆಕಾಡು ವೈಯಕ್ತಿಕ ಗೀತೆ ಮತ್ತು ವಂದೇ ಮಾತರಂ ಹಾಡಿದರು. ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿ, ಮಡಿಕೇರಿ ನಗರ ಸಂಯೋಜಕ ಧರ್ಮೇಂದ್ರ ಸ್ವಾಗತಿಸಿದರೆ ಮಡಿಕೇರಿ ತಾಲೂಕು ಸಂಯೋಜಕ ಬಾಲಕೃಷ್ಣ ರೈ ವಂದಿಸಿದರು.