ಹೆಬ್ಬಾಲೆ, ಆ. ೯: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲ ಕ್ಲಸ್ಟರ್ ವ್ಯಾಪ್ತಿಯಲ್ಲಿ ರೈತರು ೬೦ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆ ಕೈಗೊಂಡಿದ್ದಾರೆ.

ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ತಂಬಾಕು ಕೃಷಿ ಬೆಳೆಯಲಾಗುತ್ತಿದೆ. ರಾಜ್ಯ ತಂಬಾಕು ಮಂಡಳಿ ಹಾಗೂ ಹರಾಜು ಮಾರುಕಟ್ಟೆ ಸಂಖ್ಯೆ ೭ ರಾಮನಾಥಪುರ ಶಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಚಿಕ್ಕನಾಯಕನ ಹೊಸಹಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಟಿ.ಜೆ. ಶೇಷಪ್ಪ ಅವರ ಜಮೀನಿನಲ್ಲಿ ತಂಬಾಕು ಕ್ಷೇತ್ರೋತ್ಸವ ನಡೆಸಲಾಯಿತು. ರಾಮನಾಥಪುರ ಹರಾಜು ಮಾರುಕಟ್ಟೆಯ ಕ್ಷೇತ್ರ ಅಧಿಕಾರಿ ಸುನೀಲ್ ಕುಮಾರ್ ಮಾತನಾಡಿ, ತಂಬಾಕು ಒಂದು ಪ್ರಮುಖ ವಾಣಿಜ್ಯ ಹಾಗೂ ನಗದು ಬೆಳೆಯಾಗಿದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಎಫ್.ಸಿ.ವಿ ತಂಬಾಕು ಪ್ರಮುಖವಾಗಿ ಬೆಳೆಯಲಾಗುತ್ತದೆ. ರೈತರು ಗುಣಮಟ್ಟದ ತಂಬಾಕು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ತಂಬಾಕು ಮಂಡಳಿ, ಹರಾಜು ಮಾರುಕಟ್ಟೆ ಸಂಖ್ಯೆ ೭ ರಾಮನಾಥಪುರ ಸಿಬ್ಬಂದಿಗಳಾದ ಗಣೇಶ, ಪ್ರಮೋದ್, ಪ್ರಿಯಾಂಕಾ, ಕಾರ್ಮಿಕರಾದ ಜ್ಯೋತಿ, ರೂಪ ಹಾಗೂ ರೈತರು ಪಾಲ್ಗೊಂಡಿದ್ದರು.