ಸಿದ್ದಾಪುರ, ಆ. ೯ : ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುತ್ತಿರುವುದು ಹಾಗೂ ವಿವಿಧ ವಾಹನಗಳ ಚಾಲಕರು ಸಮರ್ಪಕವಾಗಿ ದಾಖಲಾತಿಗಳನ್ನು ಇಟ್ಟುಕೊಳ್ಳದೇ ವಾಹನ ಚಾಲನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಂಡ ವಿಧಿಸಲಾಯಿತು. ಈಗಾಗಲೇ ನೂರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳಿಗೆ ದಂಡ ವಿಧಿಸುವ ಮೂಲಕ ವಾಹನ ಚಾಲಕರಿಗೆ ಠಾಣಾಧಿಕಾರಿ ಬಿಸಿ ಮುಟ್ಟಿಸಿದ್ದಾರೆ. ಇದಲ್ಲದೆ ಇತ್ತೀಚೆಗೆ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭ ಆಟೊರಿಕ್ಷಾ ಚಾಲಕನೋರ್ವ ಮದ್ಯಪಾನ ಮಾಡಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಟೋ ರಿಕ್ಷಾ ಚಾಲಕನಿಗೆ ರೂ. ೧೨,೦೦೦ ದಂಡ ವಿಧಿಸಿದೆ.