ಗೋಣಿಕೊಪ್ಪಲು, ಆ. ೧೦: ವಾಣಿಜ್ಯ ನಗರ ಗೋಣಿಕೊಪ್ಪಲು ಹಾಗೂ ಸುತ್ತಮುತ್ತ ಇತ್ತೀಚೆಗೆ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತಂಡಗಳು ಈಗಾಗಲೇ ಹಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿವೆ. ಕಳ್ಳರು ಸಂಚರಿಸಿರಬಹುದಾದ ಮಾರ್ಗಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ಕಳ್ಳರ ಜಾಡು ಪತ್ತೆಹಚ್ಚುವ ನಿಟ್ಟಿನಲ್ಲಿ ರಾತ್ರಿ ಪಾಳಿಯಲ್ಲಿಯೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ತನಿಖೆಯ ಪ್ರತಿಯೊಂದು ಬೆಳವಣಿಗೆ ಹಾಗೂ ದೈನಂದಿನ ಪ್ರಗತಿಯ ಕುರಿತು ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ವಿಶೇಷ ತಂಡಗಳಿAದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ. ಪೊಲೀಸರ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಸರಣಿ ಕಳ್ಳತನ ಪ್ರಕರಣಗಳ ಆರೋಪಿಗಳು ಶೀಘ್ರದಲ್ಲೇ ಕಾನೂನಿನ ಬಲೆಗೆ ಬೀಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತ ಸಂಶಯಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬAದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ತನಿಖೆಗೆ ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ. - ಹೆಚ್.ಕೆ.ಜಗದೀಶ್