ಚೆಟ್ಟಳ್ಳಿ, ಆ. ೧೦: ಗೋವಾದಲ್ಲಿ ಇತ್ತೀಚೆಗೆ ನಡೆದ ರೈನ್ಫಾರೆಸ್ಟ್ ಚಾಲೆಂಜ್ ಇಂಡಿಯಾ ಆಫ್ರೋಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮ್ಮತ್ತಿ ಭಾಗದ ನಿವಾಸಿ ಉದ್ದಪಂಡ ಚೇತನ್ ಚಂಗಪ್ಪ ಅವರನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸನ್ಮಾನಿಸಿ ಅಭಿನಂದಿಸಿದರು.
ವೀರಾಜಪೇಟೆಯ ತಮ್ಮ ಗೃಹ ಕಚೇರಿಯಲ್ಲಿ ಚೇತನ್ ಚಂಗಪ್ಪ ಅವರನ್ನು ಸನ್ಮಾನಿಸಿದ ಶಾಸಕ ಪೊನ್ನಣ್ಣ, ಅವರ ಸಾಹಸ, ಪ್ರತಿಭೆ ಹಾಗೂ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಫ್ರೋಡ್ ಕ್ರೀಡೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೇತನ್ ಚಂಗಪ್ಪ ಅವರ ಪ್ರತಿಭೆ ಮತ್ತು ಪರಿಶ್ರಮ ಕೊಡಗಿಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಮೂಲಕ ನಾಡಿಗೆ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.