ಮಡಿಕೇರಿ, ಆ. ೧೦ : ಬಲವಂತ ಭೂಸ್ವಾಧೀನ, ಕಾಮಿಕ ವಿರೋಧಿ ಕನಿಷ್ಟ ಕೂಲಿ ಪರಿಷ್ಕರಣೆ, ವಿಬಿಮ್‌ಜಿ, ವಿದ್ಯುತ್ ತಿದ್ದುಪಡಿ, ಬೀಜಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟಿçÃಯ ಧೋರಣಾ ಚೌಕಟ್ಟು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಂಟಿ ಕಾರ್ಮಿಕ ಸಂಘಟನೆ ಮೂಲಕ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್; ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ, ವಿದ್ಯಾರ್ಥಿಗಳು ಸೇರಿದಂತೆ ಜನ ವಿರೋಧಿ ಕಾನೂನು ನೀತಿಗಳನ್ನು ಜಾರಿಮಾಡುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿದೆ. ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಯ ಮೇಲೆ ತೆರಿಗೆ ಭಾರ ಹೊರಿಸಿ ನರಳುವಂತೆ ಮಾಡುತ್ತಿವೆ. ಈಗಾಗಲೇ ಸಾಲದಲ್ಲಿ ಮುಳುಗಿರುವ ರೈತರ ಬದುಕು ಕಂಗಾಲಾಗಿದೆ.

ಬಜೆಟ್‌ಗಳಲ್ಲಿ ಸುಲಿಗೆ ಮಾಡುವ ಸಾಧನಗಳಾಗಿ ಕಾರ್ಪೋರೇಟ್ ಕಂಪೆನಿಗಳ ತಿಜೋರಿ ತುಂಬಿಸಲಾಗುತ್ತಿದೆ. ಹಾಗಾಗಿ ಕಾರ್ಪೋರೇಟ್ ಆಳ್ವಿಕೆ ವಿರುದ್ಧ ಕಾರ್ಪೋರೇಟ್‌ಗಳೇ ದೇಶಬಿಟ್ಟು ತೊಲಗಿ ಎಂಬ ಘೋಷ ವಾಕ್ಯದಡಿ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜೈಲ್‌ಭರೋ ಕಾರ್ಯಕ್ರಮದಡಿ ಪ್ರತಿಭಟನೆ ಹಮ್ಮಿಕೊಂಡಿರುವದಾಗಿ ಹೇಳಿದರು. ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ.ಸಾಬು, ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷೆ ಪ್ರೇಮ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.