ಮಡಿಕೇರಿ, ಆ. ೧೧: ಆದಿವಾಸಿ ಜನಾಂಗದ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಿಎಂ-ಜನ್ಮನ್ ಮತ್ತು ಡಿಎ-ಜೆಜಿಯುಎ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಪಿಎಂ-ಜನ್ಮನ್ ಮತ್ತು ಡಿಎ-ಜೆಜಿಯುಎ ಯೋಜನೆಗಳಡಿ ಮೂಲಸೌಕರ್ಯ, ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ಅಭಿವೃದ್ಧಿಗೆ ಸಂಬAಧಿಸಿದ ಕಾಮಗಾರಿಗಳ ಪ್ರಗತಿಯ ಕುರಿತು ಚರ್ಚಿಸಲಾಯಿತು. ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ ಬುಡಕಟ್ಟು ಸಮುದಾಯದ ಮಕ್ಕಳಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸಿಗದೆ ದಾಖಲಾತಿ, ವಿದ್ಯಾರ್ಥಿ ವೇತನ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಸಮಸ್ಯೆ ಎದುರಾಗಿದೆ ಎಂದರು. ಆಧಾರ್ ಕೋರ್ಡಿನೇಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಜನನ ಪ್ರಮಾಣ ಪತ್ರದ ಅಗತ್ಯತೆ ಇದೆ ಎಂದರು.
ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಮಾತನಾಡಿ, ಸೋಮವಾರಪೇಟೆ ಹಾಡಿ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ ಸ್ಥಳದಲ್ಲೇ ಆಧಾರ್ ನೋಂದಣಿ ಹಾಗೂ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ. ಆದರೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಕೆಲಸ ಮಾಡುವುದರಿಂದ ದಾಖಲಾತಿಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಆಧಾರ್ ಇಲ್ಲ ಎಂದು ಹೇಳುತ್ತಾರೆ. ನಂತರ ಹೊಸ ಆಧಾರ್ ನೋಂದಣಿ ಸಂದರ್ಭ ಈಗಾಗಲೇ ನೋಂದಣಿ ಆಗಿದೆ ಎಂದು ಆನ್ಲೈನ್ ಮೂಲಕ ಸೂಚಿಸಲಾಗುತ್ತಿದೆ ಎಂದು ಹೇಳಿದರು.
ಪಿಎಂಜಿಎಸ್ ವೈ ಎಇಇ ಮಾತನಾಡಿ, ೧೨ ಕಾಮಗಾರಿಗಳಲ್ಲಿ ೧೦ ಪೂರ್ಣವಾಗಿರುತ್ತದೆ ೧ ಕಾಮಗಾರಿ ಪ್ರಗತಿಯಲ್ಲಿದ್ದು ಮತ್ತೊಂದು ಹಾಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಪರಿವೇಶ್ ಪೋರ್ಟಲ್ ಮೂಲಕ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದರು. ಎಡಿಸಿ ಡಾ.ಸಹನಾ ಎಸ್.ಹಾದಿಮನಿ ಮಾತನಾಡಿ, ಪಿಎಂ-ಜನ್ಮನ್ ಮತ್ತು ಸೌಲಭ್ಯ ಯೋಜನೆಯಡಿ ಜಿಲ್ಲೆಯ ಎಲ್ಲಾ ಬುಡಕಟ್ಟು ಪ್ರದೇಶಗಳ ಮನೆಗಳಿಗೆ ಕಡ್ಡಾಯವಾಗಿ ವಿದ್ಯುತ್ ಒದಗಿಸುವಂತೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಸೆಸ್ಕ್ ಅಧಿಕಾರಿ, ಈಗಾಗಲೇ ಹಲವು ಮನೆಗಳಿಗೆ ಸೋಲಾರ್ ವಿದ್ಯುತ್ಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಕಚ್ಚಾ ಮನೆಗಳಿದ್ದು, ಅವುಗಳು ತಾತ್ಕಾಲಿಕ ಆಗಿರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಾತನಾಡಿ, ಸಣ್ಣ ಸಂಖ್ಯೆಯಲ್ಲಿರುವ ಬುಡಕಟ್ಟು ಸಮುದಾಯವನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅವರ ಅಗತ್ಯತೆಯನ್ನು ಅರಿತು ಮೂಲಭೂತ ಸೌಲಭ್ಯ ಒದಗಿಸಬೇಕು ಎಂದರು. ಹಾಡಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಅವರ ಸಂಸ್ಕೃತಿ, ಪದ್ಧತಿ ಕುರಿತು ಗೋಡೆಗಳ ಮೇಲೆ ಚಿತ್ರ ಬಿಡಿಸಿ, ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಾಡಿ ವ್ಯಾಪ್ತಿಯಲ್ಲಿ ೨೫ ಅಂಗನವಾಡಿ ಕೇಂದ್ರಗಳಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೃಷ್ಣಪ್ಪ ಮಾತನಾಡಿ, ಪಿಎಂ-ಜನ್ಮನ್ ಯೋಜನೆಯಡಿ ಶಾಲಾ ಶಿಕ್ಷಣ ಇಲಾಖೆಗೆ ಒಟ್ಟು ೪ ವಿದ್ಯಾರ್ಥಿ ನಿಲಯ ಮಂಜೂರಾಗಿದ್ದು, ಇದರಲ್ಲಿ ನಂಜರಾಯಪಟ್ಟಣ ಗ್ರಾಮಕ್ಕೆ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಮಂಜೂರಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ನಂಜರಾಯಪಟ್ಟಣ ಗ್ರಾಮದಲ್ಲಿ ಬಾಲಕರ ವಿದ್ಯಾರ್ಥಿ ನಿಲಯ ಕಾರ್ಯನಿರ್ವಹಿಸುತ್ತಿರುವ ಕಾರಣ, ಬದಲಾವಣೆ ಮಾಡಬೇಕಾಗಿದೆ. ಉಳಿದ ೩ ನಿಲಯಗಳಿಗೆ ಜಾಗ ಗುರುತಿಸಿ ಪಿಡಬ್ಲ್ಯೂಡಿ ಇಲಾಖೆಗೆ ನೀಡಲಾಗಿದ್ದು ಅಂದಾಜು ಪಟ್ಟಿ ಸಿದ್ಧಪಡಿಸುತ್ತಿರುತ್ತಾರೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಾತನಾಡಿ, ಅಗತ್ಯ ಇದ್ದಲ್ಲಿ ವಿದ್ಯಾರ್ಥಿ ನಿಲಯವನ್ನು ತೆರೆಯುವಂತೆ ತಿಳಿಸಿದರು. ಬುಡಕಟ್ಟು ಜನರಿರುವ ಪ್ರದೇಶದಲ್ಲಿ ಅವರ ಕುಂದುಕೊರತೆಗಳನ್ನು ಆಲಿಸಲು ಮತ್ತು ಸರ್ಕಾರಿ ಸೌಲಭ್ಯವನ್ನು ಒದಗಿಸಲು ಜಿಲ್ಲೆಯ ೬೮ ಗ್ರಾಮಗಳಲ್ಲಿ ಆದಿವಾಸಿ ಸೇವಾ ಕೇಂದ್ರ ತೆರೆಯಬೇಕು ಎಂದರು. ಆರೋಗ್ಯ ಶಿಬಿರ ನಡೆಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ತಮ್ಮ ಇಲಾಖೆಯ ಯೋಜನೆಗಳ ಪ್ರಗತಿ ವರದಿಯನ್ನು ಮಂಡಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಅವುಗಳನ್ನು ಶೀಘ್ರದಲ್ಲಿ ಪರಿಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಶಸ್ತ್ರಚಿಕಿತ್ಸಕರಾದ ಡಾ.ನಂಜುAಡಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಇತರರು ಇದ್ದರು.