ಕುಶಾಲನಗರ, ಆ. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನಿಸರ್ಗ ಇಕೋ ಕ್ಲಬ್ ಸಹಯೋಗದೊಂದಿಗೆ ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ಸಂದರ್ಭ ದುಶ್ಚಟಗಳಿಗೆ ಬಲಿಯಾಗಬಾರದು. ಸಮಯವನ್ನು ವ್ಯರ್ಥ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಉಪ ಪ್ರಾಂಶುಪಾಲೆ ಎಸ್.ಜಿ. ನಾಗರತ್ನ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದ ಗುರಿ ಸಾಧಿಸುವಂತಾಗಬೇಕು. ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳಬಾರದು ಎಂದರು.
ಕ್ಷೇತ್ರ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ಸುಧೀರ್ ಕ್ಷೇತ್ರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಹಿರಿಯ ದೈಹಿಕ ಶಿಕ್ಷಕರಾದ ಸದಾಶಿವ ಎಸ್. ಪಲ್ಯದ್ ಕಾರ್ಯಕ್ರಮ ನಿರೂಪಿಸಿ, ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭ ಯೋಜನೆಯ ಸೇವಾ ಪ್ರತಿನಿಧಿ ಗೀತಾ ಮತ್ತು ಶಿಕ್ಷಕರಾದ ದೇವಕಿ, ಕಮಲಮ್ಮ, ದಿನೇಶ್ ಮತ್ತಿತರರು ಇದ್ದರು.