ಸಿದ್ದಾಪುರ, ಆ. ೧೨: ಒಂಟಿ ಸಲಗ ಮನೆಯಂಗಳಕ್ಕೆ ನುಗ್ಗಿ ದಾಂಧಲೆ ನಡೆಸಿ, ಕೃಷಿ ಫಸಲುಗಳನ್ನು ನಾಶಪಡಿಸಿದ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗುಹ್ಯ ಗ್ರಾಮದ ನಿವಾಸಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ. ವೇಣುಗೋಪಾಲ್ ಅವರ ಕಾಫಿ ತೋಟದಲ್ಲಿ ಕಳೆದ ಒಂದು ವಾರದಿಂದ ಬೀಡುಬಿಟ್ಟಿದ್ದ ಒಂಟಿ ಸಲಗ ಮನೆಯಂಗಳಕ್ಕೆ ಲಗ್ಗೆ ಇಟ್ಟಿದೆ. ಬಳಿಕ ಮನೆಯ ಸುತ್ತಲೂ ಸಂಚರಿಸಿದ ಆನೆ, ಮನೆಯ ಪಕ್ಕದಲ್ಲಿದ್ದ ಶೆಡ್‌ಗೂ ನುಗ್ಗಿದೆ. ಸಲಗವು ಮನೆಯ ಸುತ್ತಲೂ ಸಂಚರಿಸುತ್ತಿರುವ ದೃಶ್ಯಗಳು ವೇಣುಗೋಪಾಲ್ ಅವರ ಮನೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಆಗಾಗ್ಗೆ ದಾಂಧಲೆ ನಡೆಸುತ್ತಿದ್ದು, ಫಸಲಿಗೆ ಬಂದಿರುವ ಕಾಫಿ ಗಿಡಗಳನ್ನು ಧ್ವಂಸಗೊಳಿಸುತ್ತಿವೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಒಂಟಿ ಸಲಗವು ಗುಹ್ಯ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವುದರಿAದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಕಾಡಾನೆಯನ್ನು ಕಾಡಿಗೆ ಮರಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.