ಮರಗೋಡು, ಆ. ೧೨; ಐರಿ ಮಕ್ಕಡ ಕೂಟ ಹಾಗೂ ಐಮಂಡ ಪೊಮ್ಮಕ್ಕಡ ಕೂಟದ ಜಂಟಿ ಆತಿಥ್ಯದಲ್ಲಿ ಮೂರನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಕಕ್ಕಡ ತೀನಿ ನಮ್ಮೆ ತಾ. ೧೬ ರಂದು ಐಮಂಡ ರೂಪೇಶ್ ಬಾಬಣ್ಣ ಅವರ ಗದ್ದೆಯಲ್ಲಿ ನಡೆಯಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಐರಿ ಮಕ್ಕಡ ಕೂಟ ಸಂಚಾಲಕ ಐಮಂಡ ಶರತ್ ಬೆಳ್ಯಪ್ಪ, ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ವಿವಿಧ ವಯೋಮಾನದವರಿಗೆ ಓಟ ಹಾಗೂ ಹಲವು ಮನರಂಜನಾ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಮಧ್ಯಾಹ್ನದ ಬಳಿಕ ಕಕ್ಕಡ ತೀನಿ ನಮ್ಮೆ ನಡೆಯಲಿದ್ದು ಆಟಿ ಮಾಸದ ವಿಶಿಷ್ಟ ಖಾದ್ಯಗಳನ್ನು ಉಣಬಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಐಮಂಡ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಐಮಂಡ ಪುಷ್ಪಾವತಿ, ಕುಟುಂಬದ ಪಟ್ಟೇದಾರ ಐಮಂಡ ಪೊನ್ನಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.