ಕುಶಾಲನಗರ, ಆ. ೧೩: ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಕುಶಾಲನಗರ ತಾಲೂಕು ಬಿಜೆಪಿ ಘಟಕದ ವತಿಯಿಂದ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಪುರಸಭೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬ ಉಂಟಾಗುತ್ತಿದೆ, ಕೆಲವು ಬೀದಿ ವ್ಯಾಪಾರಿಗಳಿಗೆ ಅಧಿಕಾರಿಗಳು ಮತ್ತು ಬೀದಿ ವ್ಯಾಪಾರಿ ಸಂಘಗಳ ಪದಾಧಿಕಾರಿಗಳು, ಪುರಸಭೆ ಮಧ್ಯವರ್ತಿಗಳು ಕಿರುಕುಳ ನೀಡುತ್ತಿದ್ದಾರೆ, ನ್ಯಾಯ ಕೇಳಲು ಹೋದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಅಧಿಕಾರಿಗಳ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೀದಿಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಬೆಸ್ತರು ತಮ್ಮ ಮೀನು ಬುಟ್ಟಿ ಸಹಿತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಲಾಯಿತು. ಪುರಸಭೆ ಅಧಿಕಾರಿಗಳು ಸಿಬ್ಬಂದಿಗಳು ಕಾಂಗ್ರೆಸ್ ನಾಯಕರುಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ, ಪುರಸಭೆಯೊಳಗೆ ಲಂಚಗುಳಿತನ ತಾಂಡವವಾಡುತ್ತಿದೆ, ಹಲವು ಅಕ್ರಮಗಳಿಗೆ, ಮದ್ಯವರ್ತಿಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ, ಬೀದಿಬದಿ ವ್ಯಾಪಾರಿಗಳಿಂದ ಮಾಮೂಲಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಸರಕಾರದ ವಿರುದ್ದ ಪ್ರತಿಭಟನಾಕಾರರು ಘೋಷಣೆ ಮೊಳಗಿಸಿದರು.
ಪಟ್ಟಣದಲ್ಲಿ ಇರುವ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವ ಬದಲು ನಿಯಮಬಾಹಿರವಾಗಿ ಸಾರ್ವಜನಿಕ ಪಾದಚಾರಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ಅನುವು ಮಾಡಿಕೊಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ನಿತಿನ ಚಕ್ಕಿ ಅವರಲ್ಲಿ ಪುರಸಭೆ ಅಧಿಕಾರಿಗಳಿಂದ ತಮಗೆ ಉಂಟಾಗಿರುವ ಅನ್ಯಾಯದ ವಿರುದ್ದ ಬೆಸ್ತ ಸಮುದಾಯದ ದಿನೇಶ್ ಅವಿನಾಶ್, ಮತ್ತು ಉದ್ಯಮಿ ಕೆ.ಡಿ.ಪ್ರಶಾಂತ್ ಆರೋಪ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮಾತು ಕೇಳಿ ಬೆಸ್ತ ಸಮುದಾಯದವರ ವ್ಯಾಪಾರಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಪುರಸಭೆಯೊಳಗೆ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡ ಕೂಡುಮಂಗಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ವಿರುದ್ದ ದೂರು ದಾಖಲಿಸಲಾಗಿದೆ. ಇವೆಲ್ಲವೂ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ನಡೆದಿದೆ. ದೂರನ್ನು ವಾಪಾಸ್ ಪಡೆಯಬೇಕಿದೆ ಎಂದು ಆಗ್ರಹಿಸಿದರು. ಪುರಸಭೆಯೊಳಗೆ ಅಧಿಕಾರಿಗಳು, ಮಧ್ಯವರ್ತಿಗಳ ದರ್ಬಾರ್ , ಲಂಚಗುಳಿತನ ಹೆಚ್ಚಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ವಿಶೇಷ ತನಿಖಾ ತಂಡದಿAದ ಕಚೇರಿಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಬೇಕಿದೆ. ಹಲವಾರು ವರ್ಷಗಳಿಂದ ಬದುಕು ಕಾಣುತ್ತಿರುವ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಕಾನೂನು ಬದ್ದ ಹಕ್ಕುಗಳನ್ನು ರಕ್ಷಿಸಬೇಕು, ಸಾರ್ವಜನಿಕರಿಗೆ ತೊಂದರೆ, ಆರೋಗ್ಯ ಹಾಗೂ ಸ್ವಚ್ಚತೆಗೆ ಧಕ್ಕೆಯಾಗುವ ರೀತಿಯಲ್ಲಿ ನಿಯಮಬಾಹಿರವಾಗಿ ಪಟ್ಟಣದಲ್ಲಿ ನಡೆಯುತ್ತಿರುವ ಮಾಂಸ ಮಾರಾಟದ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಂ.ಎA.ಚರಣ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಮಧುಸೂದನ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಮುಖಂಡರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಶಿವಾಜಿ, ಭಾಸ್ಕರ್ ನಾಯಕ್, ಚಂದ್ರಶೇಖರ್ ಹೇರೂರು, ರಕ್ಷಿತ್ ಮಾವಾಜಿ, ದಿನೇಶ್, ಮಂಜುನಾಥ್, ಪ್ರಭಾಕರ್, ಸುಮನ್, ನವನೀತ್, ಎಂ ವಿ ನಾರಾಯಣ, ಸಚಿನ್, ಅವಿನಾಶ್, ಆಸಿಫ್, ಕನಕ, ಮಣಿಕಂಠ, ಬೆಸ್ತ ಸಮುದಾಯದ ಸದಸ್ಯರು ಮತ್ತಿತರರು ಇದ್ದರು. ಈ ಸಂಬAಧ ಪುರಸಭೆ ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮೇರೆಗೆ ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ ಭರವಸೆ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರದೀಪ್ ಕುಮಾರ್ ಮತ್ತು ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಬಂದೋಬಸ್ತು ಕಲ್ಪಿಸಲಾಗಿತ್ತು.