ಶನಿವಾರಸಂತೆ, ಆ. ೧೪: ಗ್ರಾಮಮಟ್ಟದಲ್ಲಿ ಶಾಖೆಗಳನ್ನು ತೆರೆದಿರುವ ಕಾರಣದಿಂದಲೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಭಿವೃದ್ಧಿ ಹೊಂದಿದ್ದು; ಜಿಲ್ಲೆಯಲ್ಲಿ ೨೭ ಶಾಖೆಗಳೂ ಲಾಭದಾಯಕವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಶನಿವಾರಸಂತೆ ಶಾಖಾ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಗ್ರಾಹಕರ ಕುಂದುಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕಿನ ವ್ಯವಸ್ಥೆಯನ್ನು ಗಮನಿಸಿ ಗ್ರಾಹಕರು ಠೇವಣಿ ಇಡುತ್ತಾರೆ. ಬ್ಯಾಂಕಿನ ಆಡಳಿತ ಚೆನ್ನಾಗಿ ನಡೆಯಲೂ ಠೇವಣಿದಾರ ಗ್ರಾಹಕರೇ ಕಾರಣರಾಗುತ್ತಾರೆ. ಸಾಲ ಕೊಡುವಾಗ ಆಸ್ತಿಯನ್ನಷ್ಟೇ ಪರಿಗಣಿಸಬೇಕು.ಜಲ್ಲೆಯ ಎಲ್ಲಾ ಬ್ಯಾಂಕ್‌ಗಳನ್ನು ಪರಿಶೀಲಿಸಿ, ಠೇವಣಿಯಾಗಲೀ ಸಾಲವಾಗಲಿ ಹೋಲಿಸಿ ನೋಡಲಾಗುವುದು. ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ಏಕೈಕ ಬ್ಯಾಂಕ್ ಎಂದರೆ ಡಿಸಿಸಿ ಬ್ಯಾಂಕ್ ಮಾತ್ರ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಸಿ. ಶರತ್ ಶೇಖರ್ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅನ್ನು ಉನ್ನತಿ ಭವನ ಎಂದು ಹೆಸರಿಸಲಾಗಿದೆ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ಮಾರ್ಗದರ್ಶನ ಮತ್ತು ಸಮಯಪ್ರಜ್ಞೆಯಿಂದ ಬ್ಯಾಂಕ್ ರೈತರ ಬಾಳಿನ ಬೆಳಕಾಗಿ ಚೆನ್ನಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಳಿಯಪ್ಪ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಅದರದ್ದೆ ಆದ ಮಾನದಂಡವಿದೆ. ಬ್ಯಾಂಕಿನ ಜತೆ ಗ್ರಾಹಕರ ಬಾಂಧವ್ಯ ಚೆನ್ನಾಗಿದ್ದು ಸಾಧನೆಗೆ ಗ್ರಾಹಕರೇ ಕಾರಣ. ಗ್ರಾಹಕರ ಉತ್ತಮ ಆದಾಯ ಮತ್ತು ಉದ್ದೇಶ ಸಾರ್ಥಕವಾಗಬೇಕು ಎಂದರು.

ಡಿಸಿಸಿ ಬ್ಯಾಂಕ್‌ನ ಶನಿವಾರಸಂತೆ ಶಾಖಾ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಂಗರಾಜ್ ಪ್ರಾಸ್ತಾವಿಕ ನುಡಿಯನ್ನಾಡಿ, ಬ್ಯಾಂಕಿನ ಸಾಧನೆ, ಸಾಲ-ಸೌಲಭ್ಯದೊಂದಿಗೆ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಪ್ರಾ.ಕೃ.ಪ.ಸ.ಬ್ಯಾಂಕ್, ಎಪಿಸಿಎಂಎಸ್ ಮತ್ತು ಡಿಸಿಸಿ ಬ್ಯಾಂಕ್‌ಗು ಇರುವ ಬಡ್ಡಿದರದ ವ್ಯತ್ಯಾಸ, ಹಿರಿಯ ನಾಗರಿಕರ ಬಡ್ಡಿದರ, ಸಿಬ್ಬಂದಿ ಕೊರತೆ, ಫ್ಯಾಕ್ಸ್, ಸ್ವಂತ ಕಟ್ಟಡ ಇತ್ಯಾದಿಗಳ ಬಗ್ಗೆ ಚರ್ಚೆ ನಡೆದು, ಎಪಿಸಿಎಂಎಸ್‌ನ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಹಂಡ್ಲಿ ಪ್ರಾ.ಕೃ,ಪ.ಸ.ಬ್ಯಾ.ಅಧ್ಯಕ್ಷ ಚಿದಾನಂದ್, ಆಲೂರು ಪ್ರಾ.ಕೃ.ಪ.ಸ.ಬ್ಯಾ. ಅಧ್ಯಕ್ಷ ಪ್ರಸನ್ನ, ಮಹಿಳಾ ಸಮಾಜದ ಅಧ್ಯಕ್ಷೆ ಭುವನೇಶ್ವರಿ, ನಿವೃತ್ತ ಉಪಪ್ರಾಂಶುಪಾಲ ಎಸ್.ಪಿ. ರಾಜು, ನಮಸ್ಕಾರ ಚಂದ್ರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ೧೦೦ಕ್ಕೂ ಅಧಿಕ ಗ್ರಾಹಕರು ಹಾಜರಿದ್ದರು. ಶಾಖಾ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.