ನಾಪೋಕ್ಲು, ಆ. ೧೩: ನಾಪೋಕ್ಲು ಬಳಿಯ ಚೇಲಾವರ ಜಲಪಾತವು ಅಸಂಖ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ದಟ್ಟ ಹಸಿರು ಕಾಣದ ನಡುವೆ ಭೋರ್ಗರೆ ಯುತ್ತಾ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ಅವರ್ಣನೀಯ. ಇಲ್ಲಿ ಸುತ್ತಮುತ್ತಲ ಹೋಂಸ್ಟೆಗಳಲ್ಲಿ ತಂಗುವ ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ. ಸ್ಥಳೀಯರು ಕೂಡ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು. ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಈ ಕಾನನ ಬೆಡಗಿಯ ಸೌಂದರ್ಯ ವರ್ಣನಾತೀತ. ಸುಮಾರು ೧೦೦ ಅಡಿ ಎತ್ತರದಿಂದ ಧುಮುಕುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತದೆ.

ಚೋಮಕುಂದ್, ಕಬ್ಬೆಬೆಟ್ಟ ಹಾಗು ದೊಡ್ಡಬೆಟ್ಟದ ಮೂಲಕ ಹರಿದು ಬರುವ ನೀರು ಚೇಲಾವರ ಜಲಪಾತವಾಗಿ ದುಮುಕ್ಕಿ ಹರಿಯುತ್ತಿದೆ.

ಈ ಜಲಪಾತವು ಆಮೆ ಆಕಾರದ ಬಂಡೆಯನ್ನು ಹೋಲುವ ಆಕೃತಿಯಲ್ಲಿ ಕಾಣುವುದರಿಂದ ಇದನ್ನು ಆಮೆಪಾರೆ ಎಂದು ಕೂಡ ಕರೆಯುತ್ತಾರೆ. ಜಲಪಾತಕ್ಕೆ ಭೇಟಿ ನೀಡಲು ಬೆಳಿಗ್ಗೆ ೭ರಿಂದ ಸಂಜೆ ೪ರವರೆಗೆ ಮಾತ್ರ ಸಮಯ ನಿಗದಿ ಪಡಿಸಲಾಗಿದೆ. ಸಂಜೆ ೬ ಗಂಟೆಯ ನಂತರ ಜಲಪಾತ ಸಮೀಪದಲ್ಲಿ ಯಾರು ಕೂಡ ಇರಕೂಡದು. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ದುಗ್ಗಳ ಸದಾನಂದ, ಅಶ್ರಫ್