ವೀರಾಜಪೇಟೆ, ಆ. ೧೩: ಪತ್ನಿಯ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಆಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಆಕೆಯ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಆಕೆಯ ನಾಲ್ಕು ವರ್ಷದ ಮಗುವನ್ನು ಹೊಡೆದು ಕೊಲೆ ಮಾಡಿದ ಘಟನೆ ವೀರಾಜಪೇಟೆಯ ಚಿಕ್ಕಪೇಟೆಯಲ್ಲಿ ನಡೆದಿದೆ.
ಚಿಕ್ಕಪೇಟೆಯ ಪಿ. ಬೋಪಣ್ಣ ಅವರ ಲೈನ್ ಮನೆಯಲ್ಲಿ ವಾಸವಿದ್ದ ಪಂಪನಗೌಡ ಅವರ ಪತ್ನಿ ಸುಚಿತ್ರ (೨೩) ಹಲ್ಲೆಗೊಳಗಾದ ಮಹಿಳೆ. ಅವರ ದ್ವಿತೀಯ ಪುತ್ರ ಚರಣ್ (೪) ಮೃತಪಟ್ಟ ಬಾಲಕ. ಕದನೂರು ಕಾಲೋನಿ ನಿವಾಸಿ ಹೆಚ್.ಕೆ. ಪ್ರತಾಪ್ (೪೦) ಎಂಬಾತ ಆರೋಪಿಯಾಗಿದ್ದಾನೆ.
ರಾಯಚೂರು ನಿವಾಸಿ ಪಂಪನಗೌಡ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಸುಚಿತ್ರ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಬಳಿಕ ಪತಿಯ ಊರಾದ ರಾಯಚೂರಿನಲ್ಲಿ ವಾಸವಿದ್ದರು. ಮಾರ್ಚ್ನಲ್ಲಿ ಕದನೂರು ಗ್ರಾಮದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಅಜ್ಜಿ ಮನೆಗೆ ಬಂದಿದ್ದ ಸುಚಿತ್ರ, ಅಲ್ಲಿನ ಲೈನ್ ಮನೆಯಲ್ಲಿ ವಾಸವಿದ್ದು ತೋಟದ ಕೆಲಸಕ್ಕೆ ತೆರಳುತ್ತಿದ್ದರು.
ಅದೇ ಗ್ರಾಮದಲ್ಲಿ ಸುಚಿತ್ರ ಅವರ ಅಕ್ಕ ಪಲ್ಲವಿ, ಪತಿ ಪ್ರತಾಪ್ ಹಾಗೂ ಮಕ್ಕಳು ವಾಸವಿದ್ದರು. ಸುಚಿತ್ರ ಒಂಟಿಯಾಗಿ ಮಕ್ಕಳೊಂದಿಗೆ ವಾಸಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತಾಪ್ ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಸುಚಿತ್ರ ಅವರೊಂದಿಗೆ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸಿದ್ದಾನೆ. ಇದಕ್ಕೆ ಸುಚಿತ್ರ ವಿರೋಧಿಸಿದ್ದರಿಂದ ಹಲವು ಬಾರಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏಪ್ರಿಲ್ ೧ ರಂದು ಸುಚಿತ್ರ ಮನೆಗೆ ಬಂದ ಪ್ರತಾಪ್ ಬಲವಂತವಾಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಬಳಿಕ ಈತನ ಕಿರುಕುಳದಿಂದ ಬೇಸತ್ತ ಸುಚಿತ್ರ ಕದನೂರಿನ ಲೈನ್ಮನೆಯನ್ನು ತೊರೆದು ವೀರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಪಿ. ಬೋಪಣ್ಣ ಅವರ ಲೈನ್ಮನೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಕೆಲವು ದಿನಗಳ ಹಿಂದೆ ಪ್ರತಾಪ್, ತನ್ನ ಪತ್ನಿ ಪಲ್ಲವಿ ಹಾಗೂ ಮಕ್ಕಳೊಂದಿಗೆ ಚಿಕ್ಕಪೇಟೆಯ ಲೈನ್ಮನೆಗೆ ಬಂದು ಸುಚಿತ್ರ ಅವರೊಂದಿಗೆ ತಂಗಿದ್ದಾರೆ.
ತಾ. ೧೨ರ ರಾತ್ರಿ ಪಲ್ಲವಿ ಹಾಗೂ ಮಕ್ಕಳು ಮಲಗಿದ್ದ ವೇಳೆ ಪ್ರತಾಪ್ ಸುಚಿತ್ರ ಅವರ ಬಳಿ ತೆರಳಿ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧಿಸಿದ ಸುಚಿತ್ರ, ತಾನು ಅವನಿಂದ ಗರ್ಭಿಣಿಯಾಗಿರುವುದಾಗಿ ಹಾಗೂ ಮಕ್ಕಳೊಂದಿಗೆ ರಾಯಚೂರಿಗೆ ತೆರಳುವುದಾಗಿ ಹೇಳಿ ಒಬ್ಬಳೇ ಮನೆಯಿಂದ ಹೊರ ಬಂದಿದ್ದಾಳೆ.
ಈ ಸಂದರ್ಭ ಪ್ರತಾಪ್, ಮನೆಯೊಳಗಿದ್ದ ಆಕೆಯ ಪುಟ್ಟ ಬಾಲಕ ಚರಣ್ನನ್ನು ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಚರಣ್ನ ಮುಖ, ಬೆನ್ನು ಹಾಗೂ ಮರ್ಮಾಂಗದ ಭಾಗಕ್ಕೆ ಒದ್ದಿದ್ದಾನೆ. ಆ ಸಂದರ್ಭ ಸುಚಿತ್ರಾಳ ಸಹೋದರಿ ಪಲ್ಲವಿ ಹಲ್ಲೆ ನಿಲ್ಲಿಸಲು ಮುಂದಾಗಿದ್ದಾಳೆ. ಹಲ್ಲೆ ಮಾಡಿದ ಪ್ರತಾಪ್ ಪಕ್ಕದಲ್ಲೇ ಮಲಗಿ ನಿದ್ರಿಸಿದ.
ಬಳಿಕ ಸುಚಿತ್ರ ಗಾಯಗೊಂಡಿದ್ದ ಮಗ ಚರಣ್ನನ್ನು ನೋಡಲು ಮನೆಯೊಳಗೆ ತೆರಳಿದ್ದಾಳೆ. ಬಾಲಕ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನು ಗಮನಿಸಿ ಆತ ಮೃತಪಟ್ಟಿರುವುದಾಗಿ ಕಿರುಚಿದ್ದಾಳೆ. ಈ ವೇಳೆ ಪ್ರತಾಪ್, ಕಿರುಚಬೇಡ ಎಂದು ಬೆದರಿಸಿ ಕೊಡಲಿಯ ಕಾವಿನಿಂದ ಸುಚಿತ್ರ ಮೇಲೆ ಹಲ್ಲೆ ನಡೆಸಿದ್ದಾನೆ.
ಗಾಯಗೊಂಡ ಸುಚಿತ್ರ ಮೃತಪಟ್ಟ ಮಗುವನ್ನು ಮನೆಯಲ್ಲೇ ಬಿಟ್ಟು ೬ ವರ್ಷದ ಹಿರಿಯ ಪುತ್ರ ಚೇತನ್ನೊಂದಿಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾದಳು. ಅಲ್ಲದೆ ಪೊಲೀಸ್ ಪುಕಾರು ನೀಡಿದಳು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಚಿತ್ರ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಹಾಗೂ ಗ್ರಾಮಾಂತರ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. - ಕಿಶೋರ್ ಶೆಟ್ಟಿ