ಪೊನ್ನಂಪೇಟೆ, ಆ. ೧೪: ಹುಣಸೂರು ವನ್ಯಜೀವಿ ವಿಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವೀರಾಜಪೇಟೆ ಅರಣ್ಯ ವಿಭಾಗದ ವತಿಯಿಂದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಆಯೋಜಿಸಲಾಯಿತು.

ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಭಾಗವಹಿಸಿದ್ದರು.

ಪೊನ್ನಂಪೇಟೆ ಜೂನಿಯರ್ ಕಾಲೇಜಿನಿಂದ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಆನೆ ದಿನಾಚರಣೆಯ ವಿವಿಧ ಭಿತ್ತಿಪತ್ರಗಳನ್ನು ಹಿಡಿದು ಜಾಥಾ ನಡೆಸಿದರು. ಜಾಥಾ ಮುಖ್ಯ ರಸ್ತೆಯಲ್ಲಿ ಪೊನ್ನಂಪೇಟೆ ಬಸ್ ನಿಲ್ದಾಣದವರೆಗೆ ಸಾಗಿ ನಂತರ ಅರಣ್ಯ ಮಹಾವಿದ್ಯಾಲಯದಲ್ಲಿ ಕೊನೆಗೊಂಡಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ ಡೀನ್ ಪ್ರೊ. ಸಿ.ಜೆ. ಕುಶಾಲಪ್ಪ ಮಾತನಾಡಿ, ಪ್ರಸ್ತುತ ವನ್ಯಜೀವಿ ಮತ್ತು ಮಾನವ ಸಂಘರ್ಷದ ಪರಿಸ್ಥಿತಿಗೆ ಯಾವ ರೀತಿ ಚಿಂತನೆ ಮಾಡಬಹುದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದಾಗಿದೆ. ದಕ್ಷಿಣ ಕೊಡಗಿನ ಸುಳುಗೋಡುವಿನಿಂದ ತಿತಿಮತಿಯ ಹೆಬ್ಬಾಲೆವರೆಗೆ, ಆನೆಚೌಕೂರು ರೇಂಜ್ ಮತ್ತು ಬಫರ್ ಝೋನ್ ವ್ಯಾಪ್ತಿಯಲ್ಲಿ ಸುಮಾರು ೧೩ ಕಿ.ಮೀ.ವರೆಗೆ ಕಾಡಂಚಿನ ನಿವಾಸಿಗಳೊಂದಿಗೆ ಅರಣ್ಯ ಇಲಾಖೆ ಜೊತೆಗೂಡಿ ವೈಜ್ಞಾನಿಕವಾಗಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಸಲುವಾಗಿ ಪ್ರಯತ್ನಗಳು ನಡೆಯುತ್ತಿವೆ. ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ಹುಲಿ ಸಂರಕ್ಷಿತ ಪ್ರದೇಶ - ಹುಣಸೂರು ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಮಾತನಾಡಿ, ೨೦ ವರ್ಷಗಳ ಹಿಂದೆ ಆನೆ ದಂತಕ್ಕಾಗಿ ಮತ್ತು ಇತರೆ ಕಾರಣಗಳಿಗಾಗಿ ನಿರಂತರವಾಗಿ ಆನೆಗಳ ಹತ್ಯೆ ಮಾಡಲಾಗುತ್ತಿತ್ತು. ಇದನ್ನು ತಡೆಯಲು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆನೆ ದಿನಾಚರಣೆಯನ್ನು ಆಗಸ್ಟ್ ೧೨ ರಂದು ಆಚರಿಸಲಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ೬,೩೦೦ ಕಾಡಾನೆಗಳು ಇವೆ. ಇದರಲ್ಲಿ ೩೦೦ ರಿಂದ ೪೦೦ ಆನೆಗಳು ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಈ ಆನೆಗಳಿಗೆ ರೇಡಿಯೋ ಕಾಲರಿಂಗ್ ಮಾಡಿ ಅದನ್ನು ಮರಳಿ ಕಾಡಿಗೆ ಬಿಟ್ಟು, ಮತ್ತೆ ಗ್ರಾಮಗಳಿಗೆ ಬಂದರೆ ಅದರ ಇರುವಿಕೆಯನ್ನು ಪತ್ತೆಹಚ್ಚಿ ರೈತರಿಗೆ ಮತ್ತು ತೋಟದ ಕಾರ್ಮಿಕರಿಗೆ ಆನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಕೃಷಿಕರು ಆನೆಗಳಿಗೆ ಪ್ರಿಯವಾಗುವ ಭತ್ತ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವುದು ಕೂಡ ಆನೆಗಳು ಗ್ರಾಮಗಳಿಗೆ ಲಗ್ಗೆ ಇಡಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ದೇವಗಿರಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆನೆ - ಮಾನವ ಸಂಘರ್ಷ ಎಂದು ಹೇಳುವುದಕ್ಕಿಂತ ಆನೆ ಮತ್ತು ಮಾನವನ ಸಂವಹನ ಎಂದು ಹೇಳುವುದು ಸೂಕ್ತ ಎನ್ನಬಹುದು. ಏಕೆಂದರೆ ಮಾನವ ಜನಸಂಖ್ಯೆ ಹೆಚ್ಚಾದಂತೆ ವನ್ಯ ಜೀವಿಗಳಿಗೆ ಸ್ವಚ್ಛಂದವಾಗಿ ಬದುಕಲು ಸ್ಥಳದ ಕೊರತೆ ಉಂಟಾಗಿರುವುದೇ ಮಾನವ ಮತ್ತು ವನ್ಯಜೀವಿಗಳ ಸಂಘರ್ಷಕ್ಕೆ ಪ್ರಮುಖ ಕಾರಣ. ಈ ಹಿಂದೆ ಕರ್ನಾಟಕ ಒಂದರಲ್ಲೇ ೧೦ ಸಾವಿರಕ್ಕಿಂತ ಅಧಿಕ ಆನೆಗಳು ಇದ್ದವು. ಈಗ ೬,೩೦೦ಕ್ಕೆ ಇಳಿದಿದೆ. ಆನೆಗಳ ಸಂತತಿ ಕಡಿಮೆ ಆಗಿದೆ ಎಂದರೆ ಇದಕ್ಕೆ ಮಾನವನ ದಬ್ಬಾಳಿಕೆ ಹೆಚ್ಚಾಗಿದೆ ಎಂಬ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ವೀರಾಜಪೇಟೆ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಚೌಹಾಣ್ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಆನೆ - ಮಾನವ ಸಂಘರ್ಷ ಹೆಚ್ಚಾಗಿದೆ. ಆದ್ದರಿಂದ ಇಂದಿನ ಕಾರ್ಯಕ್ರಮವನ್ನು ಈ ಭಾಗದಲ್ಲಿ ನಡೆಸಲಾಯಿತು. ಕೊಡಗಿನಲ್ಲಿ ಸುಮಾರು ೧,೫೦೦ ರಷ್ಟು ಆನೆಗಳಿವೆ. ಇಲ್ಲಿನ ಹವಾಮಾನ ಆನೆಗಳ ವಂಶಾಭಿವೃದ್ಧಿಗೆ ಹೆಚ್ಚು ಅನುಕೂಲಕರವಾಗಿದೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿರುವುದು ಒಪ್ಪುವಂತಹದ್ದೇ. ಇದನ್ನು ಹೇಗೆ ನಿಯಂತ್ರಿಸಬಹುದು ಮತ್ತು ಹೇಗೆ ವನ್ಯ ಪ್ರಾಣಿಗಳೊಂದಿಗೆ ಸಹಬಾಳ್ವೆ ನಡೆಸಬೇಕೆಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.

ಆನೆ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವಿಧ ಶಾಲೆಯ ೨೩ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಇದೇ ವೇಳೆ ಆನೆಗಳನ್ನು ನಿಯಂತ್ರಿಸಲು ಬಳಸುವ ವಿವಿಧ ಆಧುನಿಕ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಎಸಿಎಫ್ ತಶೀನಾಭಾನು, ವೈಲ್ಡ್ ಎಕ್ಪೆಟೇಷನ್ ಅಧ್ಯಕ್ಷ ವೆಂಕಟೇಶ್, ಎಸಿಎಫ್ ಲಕ್ಷ್ಮಿಕಾಂತ್, ಎಸಿಎಫ್ ಗೋಪಾಲ್, ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಡೇಗೌಡ, ಪ್ರೊ. ಕೆಂಚರೆಡ್ಡಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವಲಯ ಅರಣ್ಯಾಧಿಕಾರಿ ಗಂಗಾಧರ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಕೇಶ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ವೀರನಹೊಸಳ್ಳಿ ಅರಣ್ಯಾಧಿಕಾರಿ ವಿನೋದ್ ಗೌಡ, ಮೇಟಿಕುಪ್ಪೆ ಅರಣ್ಯ ಅಧಿಕಾರಿ ಅಭಿಷೇಕ್, ಪೊನ್ನಂಪೇಟೆ ವಲಯ ಡಿಆರ್‌ಎಫ್‌ಓ ದಿವಾಕರ್, ಶ್ರೀಧರ್, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.