ಶನಿವಾರಸಂತೆ, ಆ. ೧೪: ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಸ್ಸಾಂ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸ್ಥಳೀಯ ಹಾಗೂ ಹಲವು ವರ್ಷಗಳಿಂದ ಇಲ್ಲಿ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿರುವವರಿಗೆ ಕೆಲಸದ ಅವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಿ ಗುಂಡೂರಾವ್ ಬಡಾವಣೆಯ ನಿವಾಸಿಗಳು ಹಾಗೂ ಕೂಲಿ ಕಾರ್ಮಿಕರು ವಿವಿಧ ಇಲಾಖೆಗೆ ದೂರು ನೀಡಿದ್ದಾರೆ.

ಸ್ಥಳೀಯ ಕಾರ್ಮಿಕರು ಶನಿವಾರಸಂತೆ ಪೊಲೀಸ್ ಠಾಣೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿ, ಹೊರರಾಜ್ಯದ ಕಾರ್ಮಿಕರ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮನವಿಯಲ್ಲಿ, ಗುಂಡೂರಾವ್ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಸುಮಾರು ೧೫ ಮಂದಿ ಅಸ್ಸಾಂ ಕಾರ್ಮಿಕರು ವಾಸಿಸುತ್ತಿದ್ದು, ರಸ್ತೆ ಬದಿಯಲ್ಲಿ ಗಲೀಜು ಮಾಡುವುದು, ರಾತ್ರಿ ವೇಳೆ ರಸ್ತೆಯಲ್ಲಿ ಕಿರುಚಾಡುತ್ತಾ ಓಡಾಡುವುದು, ಮದ್ಯಪಾನ ಮಾಡಿ ಸ್ಥಳೀಯ ನಿವಾಸಿಗಳಿಗೆ ಅವಾಚ್ಯವಾಗಿ ನಿಂದಿಸುವುದು ಸೇರಿದಂತೆ ಹಲವು ಅಸಭ್ಯ ಚಟುವಟಿಕೆಗಳಿಂದ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೊರರಾಜ್ಯದ ಕಾರ್ಮಿಕರ ಆಗಮನದಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸದ ಅವಕಾಶಗಳು ಇಲ್ಲದಂತಾಗಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಸ್ಥಳೀಯ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಾರ್ಮಿಕರಾದ ಪಾರ್ವತಿ, ಭಾಗ್ಯ, ಆಯಿಷಾ, ಅಸ್ಮಾ, ರಾಧ, ಶಿವರಾಜು, ರುದ್ರಮೂರ್ತಿ, ಶಾರದ, ದೇವಮ್ಮ, ಸಫಿಯಾ, ಅಶೋಕ್, ರಹಿಮತ್ ಸೇರಿದಂತೆ ಹಲವರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು