ಪೊನ್ನಂಪೇಟೆ, ಆ. ೧೫: ಇತಿಹಾಸವನ್ನು ತಿರುಚುವವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ನಾವೇ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಹೇಳಿದರು. ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಆಡಳಿತದ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ನಡೆದ ೮೦ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಸಿಗಬೇಕು, ದೇಶದ ಜನರು ಸ್ವತಂತ್ರವಾಗಿ ಬದುಕಬೇಕು ಎಂಬ ಉದ್ದೇಶದಿಂದ ತಮ್ಮ ಜೀವನ, ಕುಟುಂಬದ ಬಗ್ಗೆ ತಲೆಕೆಡಿಸಿಕೊಳ್ಳದೆ ತ್ಯಾಗ-ಬಲಿದಾನ ಮಾಡಿದ ಮಹಾತ್ಮರನ್ನು ನಾವು ಸ್ಮರಿಸಬೇಕು ಎಂದ ಅವರು ಇಂದು ಕೆಲವು ಶಕ್ತಿಗಳು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ಮಾಹಿತಿಯನ್ನು ನಂಬಬೇಡಿ. ಸ್ವತಂತ್ರವಾಗಿ ಆಲೋಚಿಸಿ, ನೀವೇ ಅಧ್ಯಯನ ಮಾಡಿ ಸತ್ಯವನ್ನು ತಿಳಿದುಕೊಳ್ಳಿ. ನಿಮ್ಮ ಒಂದೊAದು ಹೆಜ್ಜೆಯೂ ನಿಮ್ಮ ಭವಿಷ್ಯದ ಜೊತೆಗೆ ಈ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದು ಯುವಜನತೆಗೆ ಪೊನ್ನಣ್ಣ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಶಿಸ್ತುಬದ್ಧ ಬದುಕನ್ನು ಮೈಗೂಡಿಸಿಕೊಂಡು ಸದೃಢ ಸಮಾಜ ಕಟ್ಟುವಲ್ಲಿ ತಮ್ಮ ಕೊಡುಗೆ ನೀಡುವಂತೆ ಅವರು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಸಂಜನಾ ಸಿ.ಎಸ್. ಯಾವುದೇ ಜಾತಿ, ಧರ್ಮ, ಭಾಷೆ ಎಂಬ ಬೇದ ಭಾವ ಇಲ್ಲದೇ ದೇಶದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು. ನಮ್ಮ ದೇಶ ತಂತ್ರಜ್ಞಾನ, ವಿಜ್ಞಾನ, ಕ್ರೀಡೆ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಶ್ರೀಮಂತಿಕೆಯಿAದ ಕೂಡಿದೆ ಎಂದರು.
ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ ಹಾಗೂ ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಸುಮಾ, ಚೆಸ್ಕಾಂ ಇಲಾಖೆ ಸಿಬ್ಬಂದಿ ಬಾಳಪ್ಪ ಗುರಿಕಾರ್, ಅಂಗನವಾಡಿ ಕಾರ್ಯಕರ್ತೆ ಭಾಗ್ಯ, ಡೇಟಾ ಎಂಟ್ರಿ ಆಪರೇಟರ್ ಧನು, ಪೌರಕಾರ್ಮಿಕರಾದ ಗೌರಮ್ಮ ಹಾಗೂ ಶೈಕ್ಷಣಿಕ ಸಾಧನೆಗಾಗಿ ಲಿಖಿತ, ನಮನ, ಕ್ರೀಡಾ ಸಾಧನೆಗಾಗಿ ಧನ್ಯಾ ಕಾವೇರಮ್ಮ, ಸಾಂಸ್ಕೃತಿಕ ಸಾಧನೆಗಾಗಿ ವಿನೀತ್ ಎಂ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಕೆ.ಪಿ.ಎಸ್. ಪ್ರೌಢಶಾಲೆ ವಿದ್ಯಾರ್ಥಿಗಳಿಂದ ನಾಡಗೀತೆ, ಶಿಕ್ಷಕರಿಂದ ನಾಡಗೀತೆ, ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ನೃತ್ಯಗಳು ಹಾಗೂ ನಾಟಕ ಮೂಡಿಬಂದವು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಬಗರ್ ಹುಕುಂ ಅಧ್ಯಕ್ಷ ಲಾಲಾ ಅಪ್ಪಣ್ಣ, ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ. ಆರ್, ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಆರ್ ಮುಧೋಳ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಿ. ಎಸ್, ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಜಿ. ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಶ್, ಕೆಪಿಎಸ್ ಶಾಲಾ ಉಪ ಪ್ರಾಂಶುಪಾಲ ಚಂಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.