ಚೆಟ್ಟಳ್ಳಿ, ಆ. ೧೫: ರೈತರು ಹಾಗೂ ಸದಸ್ಯರ ವಿಶ್ವಾಸವನ್ನು ಗಳಿಸಿಕೊಂಡಿರುವ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫ - ೨೬ನೇ ಸಾಲಿನಲ್ಲಿ ರೂ. ೭೫.೩೫ ಲಕ್ಷ ನಿವ್ವಳ ಲಾಭ ಗಳಿಸಿ ಮತ್ತೊಮ್ಮೆ ಆರ್ಥಿಕವಾಗಿ ತನ್ನ ಸದೃಢತೆಯನ್ನು ಸಾಬೀತುಪಡಿಸಿದೆ. ಸಂಘದ ಸದಸ್ಯರ ವಿಶ್ವಾಸದೊಂದಿಗೆ ರೂ. ೭೫ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ಸಂಘದ ವಾರ್ಷಿಕ ಮಹಾಸಭೆ ತಾ. ೩೦ ರಂದು ನಡೆಯಲಿದ್ದು, ಈ ಬಾರಿ ಸದಸ್ಯರಿಗೆ ಹೆಚ್ಚಿನ ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ೧೯೭೭ರಲ್ಲಿ ಸಣ್ಣ ಸಹಕಾರ ಸಂಘವಾಗಿ ಆರಂಭವಾದ ಈ ಸಂಸ್ಥೆ ಇಂದು ಸಹಕಾರ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದು, ರೈತರು ಹಾಗೂ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಕೃಷಿ ಸಾಲ, ಠೇವಣಿ, ರೈತಪರ ಯೋಜನೆಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸದಸ್ಯರ ವಿಶ್ವಾಸವನ್ನು ಗಳಿಸಿದೆ.

ಸಂಘದ ಮುಖ್ಯ ಕಚೇರಿಯಲ್ಲಿರುವ ವಿಶ್ವಗುರು ನರೇಂದ್ರ ಮೋದಿ ಸಹಕಾರ ಭವನ, ಅನ್ನದಾತ ಸಭಾಂಗಣ, ಮುಂಭಾಗದಲ್ಲಿರುವ ಕುಲದೇವಿ ಕಾವೇರಿ ಪ್ರತಿಮೆ, ಗೋಮಾತೆ, ಶ್ರೀಕೃಷ್ಣ ಹಾಗೂ ಮೋದಿ ಭವನದಲ್ಲಿನ ಮಹಾವಿಷ್ಣು, ಗಣಪತಿ, ವೀರಾಂಜನೇಯ ಮತ್ತು ಈರಳೆ ಶಾಖೆಯಲ್ಲಿನ ಪಂಚಮುಖಿ ವಾಯುಪುತ್ರ ಪ್ರತಿಷ್ಠಾಪನೆಗಳು ವಿಶೇಷ ಆಕರ್ಷಣೆಯಾಗಿವೆ.

ಸಂಘವು ದೇಶಕ್ಕಾಗಿ ಹೋರಾಡಿದ ವೀರ ಯೋಧರು, ಸ್ಥಳೀಯ ಸಾಧಕರು, ಪತ್ರಕರ್ತರು, ಹಿರಿಯ ನಾಗರಿಕರು, ಸಮಾಜಸೇವಕರು, ವಿದ್ಯಾರ್ಥಿಗಳು ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ಗಣ್ಯರನ್ನು ಗೌರವಿಸುವ ಪರಂಪರೆಯನ್ನು ಬೆಳೆಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಸದಸ್ಯರ ಕುಟುಂಬ ಕಾರ್ಯಕ್ರಮಗಳಿಗೆ ಸಂಘದ ಸಭಾಂಗಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಗ್ರಾಮ ದೇವಾಲಯಗಳು, ಕುಟುಂಬದ ಐನ್‌ಮನೆಗಳು ಹಾಗೂ ಕೈಮಡಗಳ ಅಭಿವೃದ್ಧಿಗೆ ದೇಣಿಗೆ ನೀಡುತ್ತಿದ್ದು, ರೈತರ ಅನುಕೂಲಕ್ಕಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.

ಸುವರ್ಣ ಮಹೋತ್ಸವಕ್ಕೆ ಸಿದ್ಧತೆ

೧೯೭೭ರಲ್ಲಿ ಸ್ಥಾಪನೆಯಾದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮುಂದಿನ ವರ್ಷ ತನ್ನ ೫೦ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ವರ್ಷಪೂರ್ತಿ ವಿವಿಧ ರೈತಪರ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆಗಳು ಆರಂಭಗೊAಡಿವೆ ಎಂದು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ಸದಸ್ಯರ ಸಹಕಾರ, ಪಾರದರ್ಶಕ ಆಡಳಿತ, ಸಾಮಾಜಿಕ ಬದ್ಧತೆ ಹಾಗೂ ರೈತಪರ ಸೇವೆಗಳ ಮೂಲಕ ಸಂಘವು ಪ್ರತಿವರ್ಷ ಉತ್ತಮ ಸಾಧನೆ ದಾಖಲಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪ್ರಗತಿಯತ್ತ ಸಾಗುವ ವಿಶ್ವಾಸವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ.

- ಪುತ್ತರಿರ ಕರುಣ್ ಕಾಳಯ್ಯ.