ಮಡಿಕೇರಿ, ಅ. ೨೮: ಮುಂಬರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಲೋಕೇಶ್ ಸಾಗರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಕನ್ನಡಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪದಾಧಿಕಾರಿಗಳು, ಲೋಕೇಶ್ ಸಾಗರ್ ಅವರು ಈ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಿವಿಧ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತಿಗಳು, ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.

ಕೋವಿಡ್ ಹಾಗೂ ಅತಿವೃಷ್ಟಿಯಂತಹ ಸವಾಲುಗಳ ನಡುವೆಯೂ ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದ ಅವರ ಸೇವೆಯನ್ನು ಪರಿಗಣಿಸಿ, ಮತ್ತೊಮ್ಮೆ ಕನ್ನಡದ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಳಗದ ಪದಾಧಿಕಾರಿಗಳಾದ ಎಂ.ಡಿ. ರಂಗಸ್ವಾಮಿ, ಕೆ.ಎಸ್. ರಮೇಶ್, ಕುಡೆಕಲ್ ಸಂತೋಷ್, ಹೆಚ್.ಜೆ. ಜವರಪ್ಪ, ಎಂ.ಡಿ. ರಂಗಸ್ವಾಮಿ, ಸಿ.ಕೆ. ಮಲ್ಲಪ್ಪ ಇವರುಗು ಮಾತನಾಡಿ, ಲೋಕೇಶ್ ಸಾಗರ್ ಅವರ ಕನ್ನಡಪರ ಸೇವೆಯನ್ನು ಮುಂದುವರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.