ಚೆಯ್ಯಂಡಾಣೆ, ಅ. ೨೮: ಸುನ್ನೀ ಕೋಆರ್ಡಿನೇಷನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ ಹಾಗೂ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಸಂಸ್ಮರಣಾ ಕಾರ್ಯಕ್ರಮವು ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆಯಿತು.
ನಾಪೋಕ್ಲು ಪಟ್ಟಣದ ಮಾರ್ಕೆಟ್ ಆವರಣದಲ್ಲಿರುವ ತಾಜುಲ್ ಉಲಮಾ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಾಗ್ಮಿ ಡಾ. ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವವರಾಗಿದ್ದಾರೆ ವಿದ್ವಾಂಸರು, ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಜ್ಞಾನ, ವಿಶ್ವಾಸ ಮತ್ತು ಉತ್ತಮ ಗುಣನಡತೆಗಳು ಸಮಾಜದಲ್ಲಿ ನೈಜ ಬದಲಾವಣೆ ತರಲು ಅತ್ಯಗತ್ಯ ಎಂದು ಹೇಳಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಇತಿಹಾಸವು ಕೇವಲ ಒಂದು ಸಂಘಟನೆಯ ಇತಿಹಾಸವಲ್ಲ; ಅದು ಸಮುದಾಯದ ವಿಶ್ವಾಸದ ಸಂರಕ್ಷಣೆ, ಜ್ಞಾನವಿಕಾಸ ಮತ್ತು ನೈತಿಕ ಪ್ರಗತಿಯ ಇತಿಹಾಸವಾಗಿದೆ. ೧೯೨೬ರಲ್ಲಿ ಸ್ಥಾಪನೆಯಾದ ಸಮಸ್ತವು ಶತಮಾನದ ಇತಿಹಾಸದೊಂದಿಗೆ ಮುನ್ನಡೆಯುತ್ತಿದ್ದು, ಕಾಲದ ಸವಾಲುಗಳ ನಡುವೆಯೂ ಅಹ್ಲುಸ್ಸುನ್ನತಿ ವಲ್ ಜಮಾಅತ್ನ ಆದರ್ಶಗಳನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಮಹತ್ವದ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಈ ಮಹಾನ್ ಚಳವಳಿಯ ಹಿಂದೆ ಅನೇಕ ಮಹಾವಿದ್ವಾಂಸರ ಜ್ಞಾನ, ನಿಷ್ಠೆ, ತ್ಯಾಗ ಮತ್ತು ಪ್ರಾರ್ಥನೆಗಳಿವೆ. ಅವರ ಜೀವನವು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಶತಮಾನೋತ್ಸವದ ಪ್ರಚಾರವು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಜ್ಞಾನದ ಪ್ರಸಾರ, ಆದರ್ಶಗಳ ಪ್ರಚಾರ ಹಾಗೂ ಉತ್ತಮ ತಲೆಮಾರಿನ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂದು ಅವರು ಕರೆ ನೀಡಿದರು. ಕೂರ್ಗ್ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಅಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ ಹಾಗೂ ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮನ್ ಅವರು ಸಮ್ಮೇಳನಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಅಝಿಝ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಅಬ್ದುಲ್ ಖಾದರ್ ಅಯ್ಯಂಗೇರಿ, ಸಯ್ಯಿದ್ ಅಝಿಝ್ ತಂಙಳ್ ಮಲೇಷಿಯಾ, ಕೂರ್ಗ್ ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು, ಮುಶಾವರ ಸದಸ್ಯರಾದ ಸಿ.ಕೆ. ಅಹ್ಮದ್ ಮುಸ್ಲಿಯಾರ್, ನಿಝಾರ್ ಅಹಸನಿ ಕಕ್ಕಡಿಪುರಂ, ಅಬೂಬಕ್ಕರ್ ಹಾಜಿ ಹಾಕತ್ತೂರು, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಕನ್ವೀನರ್ ಮುಹಮ್ಮದ್ ಹಾಜಿ ಕುಂಜಿಲ, ಕೋಶಾಧಿಕಾರಿ ಖಾಲಿದ್ ಫೈಝಿ ಅಂಬಟ್ಟಿ, ಎಸ್ವೈಎಸ್ ಕೊಡಗು ಜಿಲ್ಲಾ ಅಧ್ಯಕ್ಷ ಮುನೀರ್ ಮಹ್ಳರಿ, ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಎಸ್ಎಸ್ಎಫ್ ಜಿಲ್ಲಾ ಅಧ್ಯಕ್ಷ ಕಮರುದ್ದಿನ್ ಸಖಾಫಿ, ಕಾರ್ಯದರ್ಶಿ ಜುನೈದ್ ಅಮ್ಮತಿ, ಎಸ್ಜೆಎಂ ಜಿಲ್ಲಾ ಅಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ, ಪ್ರಧಾನ ಕಾರ್ಯದರ್ಶಿ ಷಂಶುದ್ದಿನ್, ಅಮ್ಜದಿ ಬಲಮುರಿ, ಕೊಡಗು ಜಿಲ್ಲಾ ಇ.ಸಿ. ಅಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಕೊಳಕೇರಿ, ಕೊಡಗು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಹಾಜಿ ಕೊಳಕೇರಿ, ಹಂಝ ಕೊಟ್ಟಮುಡಿ, ಹನೀಫ್ ಸಖಾಫಿ ಕೊಂಡAಗೇರಿ, ಉಮ್ಮರ್ ಸಖಾಫಿ ಹಾಗೂ ಆರಫಾತ್ ನಾಪೋಕ್ಲು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಕಿಲ್ಲೂರ್ ತಂಙಳ್ ಪ್ರಾರ್ಥಿಸಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಕನ್ವೀನರ್ ಮುಹಮ್ಮದ್ ಹಾಜಿ ಕುಂಜಿಲ ಸ್ವಾಗತಿಸಿ, ವಂದಿಸಿದರು.