ಮಡಿಕೇರಿ, ಅ. ೩೧: ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ರೈತರಿಗೆ ರೂ. ೨,೫೦೦ ಪರಿಹಾರ ನೀಡುವುದಾಗಿ ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದೀಗ ಇದಕ್ಕೆ ಸುಮಾರು ೧೭ ಷರತ್ತುಗಳನ್ನು ವಿಧಿಸಲಾಗುತ್ತಿದ್ದು, ಈ ಬಗ್ಗೆ ಬಿ.ಜೆ.ಪಿ. ಖಂಡನೆ ವ್ಯಕ್ತಪಡಿಸುವುದಾಗಿ ಪಕ್ಷದ ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರಕಾರವು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕರ್ನಾಟಕ ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರವು ಕಳೆದ ಅಧಿವೇಶನದಲ್ಲಿ ರೈತರಿಗೆ ಗರಿಷ್ಠ ೨,೫೦೦ ರೂಪಾಯಿಗಳನ್ನು ಪರಿಹಾರವಾಗಿ ಘೋಷಣೆ ಮಾಡಿ ಡಿ.ಕೆ. ಶಿವಕುಮಾರ್ ಅವರು ನಾನು ರೈತರ ಪರ ಎಂದೂ ಹೇಳಿಕೊಂಡಿದ್ದರು.

ಆದರೆ, ಮುಖ್ಯಮಂತ್ರಿಯವರು ಅಧಿವೇಶನದಲ್ಲಿ ನೀಡಿದ ಭರವಸೆ ಯಂತೆ, ನೇರವಾಗಿ ರೈತರಿಗೆ ಪರಿಹಾರವನ್ನು ಕೊಡುವುದನ್ನು ಬಿಟ್ಟು ೧೭ ಷರತ್ತುಗಳನ್ನು ವಿಧಿಸಿ ನಾಟಕ ಮಾಡುವುದನ್ನು ಬಿ.ಜೆ.ಪಿ. ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ಸರಕಾರದ ಖಜಾನೆ ಖಾಲಿ ಆಗಿರುವುದಕ್ಕೆ ಇದು ಸಾಕ್ಷಿಯಾಗಿದೆ. ಬಿ.ಜೆ.ಪಿ. ಸರಕಾರದ ಹಿಂದಿನ ಅವಧಿಯಲ್ಲಿ ಆಡಳಿತ ನಡೆಸುತ್ತಿದ್ದಾಗ ರೈತರಿಗೆ ಯಾವುದೇ ಷರತ್ತು ವಿಧಿಸದೇ, ನೇರವಾಗಿ ರೈತರ ಖಾತೆಗೆ ೫೦ ರಿಂದ ೫೫ ಸಾವಿರದವರೆಗೆ ಪರಿಹಾರ ಮೊತ್ತವನ್ನು ನೀಡಲಾಗಿತ್ತು.

ಇದೀಗ ಕಾಂಗ್ರೆಸ್ ಸರಕಾರದ ಆಡಳಿತ ನಡೆಸುವಲ್ಲಿ ವಿಫಲವಾಗಿ, ಖಜಾನೆಯಲ್ಲಿ ಹಣವಿಲ್ಲದೆ ಬಡವರು ಮತ್ತು ಶ್ರೀಸಾಮಾನ್ಯರು ಉಪಯೋಗಿಸುವ ಹಾಲಿನ ದರವನ್ನು ಹೆಚ್ಚಿಸಿ, ಬಸ್ ದರವನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವ ನೀತಿಯನ್ನು ಬಿ.ಜೆ.ಪಿ. ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.