ಮಡಿಕೇರಿ, ಅ. ೩೧ : ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ, ಗುಣಮಟ್ಟದ ಸುರಕ್ಷತಾ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಹಾಗೂ ಮ್ಯಾನುವಲ್ ಸ್ಕಾö್ಯವೆಂಜರ್ಸ್ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿಗಳನ್ನು ನೇರವಾಗಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಿಗೆ ಇಳಿಸಬಾರದು. ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಪ್ರತಿದಿನದ ಕೆಲಸದ ವೇಳೆ ಧರಿಸಲು ಗುಣಮಟ್ಟದ ರಕ್ಷಣಾ ಪರಿಕರಗಳು, ಗ್ಲೌಸ್, ಬೂಟ್‌ಗಳು ಮತ್ತು ಮಾಸ್ಕ್ಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಇದರೊಂದಿಗೆ ಎಲ್ಲಾ ಕರ್ಮಚಾರಿಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೆ ಉಚಿತ ಹಾಗೂ ಸಂಪೂರ್ಣ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸಲು ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುತ್ತಿಗೆ ಆಧಾರದ ಮೇಲೆ ಹಾಗೂ ನೇರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸರ್ಕಾರದ ನಿಯಮಾನುಸಾರ ಇ.ಎಸ್.ಐ. ಮತ್ತು ಭವಿಷ್ಯ ನಿಧಿ (ಪಿ.ಎಫ್.) ಸೌಲಭ್ಯಗಳು ದೊರೆಯುವಂತಾಗಬೇಕು. ನಿಗಮದ ವತಿಯಿಂದ ಲಭ್ಯವಿರುವ ಸ್ವಯಂ ಉದ್ಯೋಗ ಸಾಲ ಸೌಲಭ್ಯಗಳು, ವಸತಿ ಮತ್ತು ನಿವೇಶನ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಇಲಾಖಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಅವರು ಮಾತನಾಡಿ, ಗೋಣಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಾಸ ಇರುವ ಮನೆ ಪಕ್ಕದಲ್ಲಿ ಮಾಂಸದ ಮಳಿಗೆ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳಿದ್ದು, ಇವುಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಪೌರ ಕಾರ್ಮಿಕರು ವಾಸವಿರುವ ಮನೆ ಪಕ್ಕದಲ್ಲಿ ಇರುವ ಸೆಪ್ಟಿಕ್ ಟ್ಯಾಂಕ್ ತೆರವುಗೊಳಿಸಿ ಪೌರಕಾರ್ಮಿಕರ ಸಮಸ್ಯೆ ಇತ್ಯರ್ಥಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಪತ್ರ ರವಾನಿಸಿ ಕ್ರಮ ಕೈಗೊಂಡಿರುವುದಾಗಿ ಅಲ್ಲಿನ ತಾ.ಪಂ.ಇಒ ಅವರು ಮಾಹಿತಿ ನೀಡಿದ್ದಾರೆ. ಹಾಗೆಯೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಎರಡು ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಡಿ.ಆರ್. ರಾಜು ಮಾತನಾಡಿ, ಆ ಜಾಗದಲ್ಲಿ ೨೬ ಕುಟುಂಬಗಳಿದ್ದು, ಬೇರೆಡೆ ತೆರಳಲು ಕಷ್ಟಸಾಧ್ಯ. ಅಲ್ಲದೇ ಅಧಿಕಾರಿಗಳು ಸೂಚಿಸಿರುವ ಜಾಗ ಸೂಕ್ತ ಇಲ್ಲದೆ ಇರುವುದರಿಂದ ಹಾಲಿ ಇರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಅವರು ಮಾತನಾಡಿ, ಸೆಪ್ಟಿಕ್ ಟ್ಯಾಂಕ್ ತೆರವುಗೊಳಿಸಲು ಕ್ರಮ ಕೈಗೊಂಡು, ಯೋಗ್ಯವಾದ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಸಮಿತಿ ಸದಸ್ಯ ರಂಗಸ್ವಾಮಿ ಅವರು ಸಫಾಯಿ ಕರ್ಮಚಾರಿಗಳು ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ಮಿಕ ಇಲಾಖೆಯ ನಿಯಮದಂತೆ ವೇತನ ನೀಡುವಂತಾಗಬೇಕು. ಜೊತೆಗೆ ಪಿಎಫ್, ಇಎಸ್‌ಐ ಸೌಲಭ್ಯ ಒದಗಿಸುವಂತಾಗಬೇಕು ಎಂದು ಕೋರಿದರು.

ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಉಲುಗುಲಿ ಗ್ರಾಮದಲ್ಲಿ ವಾಸವಿರುವ ಬಡ ಕುಟುಂಬಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕಿದೆ ಎಂದು ಕೋರಿದರು. ಅಲ್ಲದೇ ಸರ್ಕಾರ ಯೋಜನೆಯನ್ನು ಪೌರಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸುವಂತೆ ತಿಳಿಸಿದರು.

ಡಿ.ಆರ್. ರಾಜು ಮಾತನಾಡಿ, ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ೨೮ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಿ ಆದೇಶದನ್ವಯ ಮೂರು ಜನ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅವಕಾಶವಿದೆ. ಆದರೆ ಪೌರಕಾರ್ಮಿರ‍್ನು ಖಾಯಂಗೊಳಿಸಲು ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಮಾತನಾಡಿ, ಅರ್ಹ ಪೌರಕಾರ್ಮಿಕರನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ನವೆಂಬರ್ ೭ ರಂದು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಬAಧಿಸಿದವರು ಅಗತ್ಯ ಮಾಹಿತಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಗೋಣಿಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ನಗರಸಭೆ ಪೌರಾಯುಕ್ತ ಹೆಚ್.ಆರ್. ರಮೇಶ್, ಗೋಣಿಕೊಪ್ಪ ಪೌರಕಾರ್ಮಿಕ ಕಾಲೋನಿಯ ವಿಜಯ್ ಕುಮಾರ್, ಪೊನ್ನಂಪೇಟೆಯ ಪರಮೇಶ್, ಗುಮ್ಮನಕೊಲ್ಲಿಯ ರಾಜೇಶ್ವರಿ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಸಾಮಾಜಿಕ ಅಭಿವೃದ್ಧಿ ತಜ್ಞರು ಮತ್ತು ಸಮಿತಿಯ ಸದಸ್ಯರು ಇದ್ದರು.