ಮಡಿಕೇರಿ, ಅ. ೩೧: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ‘ಬೆಳೆ ದರ್ಶಕ್-೨೦೨೬’ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿಕೊಳ್ಳುವಂತೆ ಸೋಮವಾರಪೇಟೆ/ ಕುಶಾಲನಗರ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕೆ.ಪಿ. ಮನವಿ ಮಾಡಿದ್ದಾರೆ.
ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಗಳಿಗೂ ರೈತರು ತಮ್ಮ ಜಮೀನಿನಲ್ಲಿ ವಾಸ್ತವವಾಗಿ ಬೆಳೆದಿರುವ ಬೆಳೆಗಳಿಗೂ ವ್ಯತ್ಯಾಸವಿದ್ದಲ್ಲಿ ಅಥವಾ ಇನ್ನೂ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳದಿದ್ದಲ್ಲಿ ‘ಬೆಳೆ ದರ್ಶಕ್-೨೦೨೬’ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಈ ಮೂಲಕ ತಮ್ಮ ಜಮೀನಿನಲ್ಲಿರುವ ಬೆಳೆಗಳ ಸರಿಯಾದ ಮಾಹಿತಿ ಸರ್ಕಾರದ ದಾಖಲೆಗಳಾದ ಪಹಣಿಯಲ್ಲಿ ನಮೂದಾಗುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡಿಸದ ರೈತರು ಬೆಳೆ ವಿಮೆ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುವುದಿಲ್ಲ. ರೈತರು ಬೆಳೆದ ಬೆಳೆಗಳನ್ನು ಪಹಣಿಯಲ್ಲಿ ದಾಖಲಿಸಲು, ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಲು, ಬೆಳೆದ ಫಸಲನ್ನು ಸರ್ಕಾರಿ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಲು ಹಾಗೂ ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆಯ ವರದಿ ಕಡ್ಡಾಯವಾಗಿರುತ್ತದೆ.
ಆದ್ದರಿಂದ ರೈತರು ತಮ್ಮ ಜಮೀನಿನ ಸರ್ವೆ ನಂಬರ್ವಾರು ಬೆಳೆ ಸಮೀಕ್ಷೆಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ದಾಖಲಾತಿಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ಅಥವಾ ಬೆಳೆ ಸಮೀಕ್ಷೆ ಬಾಕಿ ಇದ್ದಲ್ಲಿ ನ.೪ ರೊಳಗೆ ‘ಬೆಳೆ ದರ್ಶಕ್-೨೦೨೬’ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸುವಂತೆ ಸೋಮವಾರಪೇಟೆ/ ಕುಶಾಲನಗರ ಸಹಾಯಕ ಕೃಷಿ ನಿರ್ದೇಶಕರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.