ಒಡೆಯನಪುರ, ಮೇ 15: ಇಂದು ಗ್ರಾಮೀಣ ಪ್ರದೇಶಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಸಮಸ್ಯೆ ಇರುವಂತಹ ರೋಗಿಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರ ಆರೋಗ್ಯ ವೃದ್ಧಿಯ ಹಿತದೃಷ್ಟಿಯಿಂದ ಇಂತಹಾ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಇಂತಹ ಕಾಯಿಲೆಗಳ ಬಗ್ಗೆ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಪರ್ಣ ಕೃಷ್ಣಾನಂದ ಅಭಿಪ್ರಾಯಪಟ್ಟರು.

ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅರೋಗ್ಯ ಇಲಾಖೆ, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗಳ ಕುರಿತಾಗಿ ನಡೆದ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.

ಮಧುಮೇಹ ಕಾಯಿಲೆಗಳಿಗೆ ಸಂಬಂಧಪಟ್ಟಂತಹ ಹಲವಾರು ಕಾಯಿಲೆಗಳಿರುವದರಿಂದ ಇಂತಹ ಕಾಯಿಲೆಗಳ ಬಗ್ಗೆ ಯಾರೂ ಸಹ ಉದಾಸೀನ ಮಾಡದೆ ಹತ್ತಿರದಲ್ಲಿರುವ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿರಬೇಕು. ಇಂದು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಜನರು ಬಲಿಯಾಗುತ್ತಿದ್ದಾರೆ. ಇದಕ್ಕೆ ಜನರಲ್ಲಿ ಈ ಕಾಯಿಲೆಗಳ ಬಗ್ಗೆ ತಾತ್ಸಾರದ ಭಾವನೆಯೇ ಕಾರಣವಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳನ್ನು ಮಧುಮೇಹ ತಜ್ಞರು ತಪಾಸಣೆ ನಡೆಸಿದರು. ಮಧುಮೇಹ ಲಕ್ಷಣ ಇರುವ ರೋಗಿಗಳಿಗೆ ಇಸಿಜಿ ಮೂಲಕ ಪರೀಕ್ಷಿಸಿ ಉಚಿತವಾಗಿ ಮಾತ್ರೆ ಹಾಗೂ ರೋಗಿಗಳಿಗೆ ಸಲಹೆ-ಸೂಚನೆಗಳನ್ನು ನೀಡಲಾಯಿತು. ಶಿಬಿರದಲ್ಲಿ ತಜ್ಞ ವೈದ್ಯರಾದ ಮಡಿಕೇರಿ ಸರಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್ ಜಾಯ್ಕರ್, ಡಾ. ಸುಪರ್ಣ ಕೃಷ್ಣನಂದ, ಡಾ. ಇಂದೂಧರ್ ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಸೇರಿದಂತೆ ಅಕ್ಕಪಕ್ಕ ಗ್ರಾಮಗಳಿಂದ ಮಧುಮೇಹ ಸಮಸ್ಯೆ ಇರುವ ನೂರಾರು ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಕೆ. ಸತ್ಯ, ಮೈಸೂರಿನ ವೈದ್ಯಕೀಯ ಉಪಕರಣ ಸಂಯೋಜಕ ಶ್ಯಾಮ್, ಗೀತಾ, ಆರೋಗ್ಯ ಪರಿವೀಕ್ಷಕ ಶಿವಪ್ರಕಾಶ್ ಮುಂತಾದವರಿದ್ದರು.

- ವಿ.ಸಿ. ಸುರೇಶ್ ಒಡೆಯನಪುರ