ಶ್ರೀಮಂಗಲ, ಜೂ. 28: ಕುಟ್ಟ-ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮದೊಳಗೆ ಸೇರಿಕೊಂಡು ಆಸ್ತಿ-ಪಾಸ್ತಿ ಹಾನಿ ಮಾಡುತ್ತಿದ್ದು, ಇದರೊಂದಿಗೆ ನಾಗರಿಕರಲ್ಲಿ ಜೀವಭಯ ಉಂಟಾಗಿದೆ.

ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಾಗರಿಕರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಜುಲೈ 1 ರಂದು ಕುಟ್ಟ ಕೊಡವ ಸಮಾಜದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿ.ಪಂ. ಸದಸ್ಯ ಶಿವು ಮಾದಪ್ಪ ಹೇಳಿದ್ದಾರೆ.

ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಹಾಗೂ ಉಪನಿರೀಕ್ಷಕ ರವಿಕಿರಣ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾಡಾನೆ ಹಾವಳಿ ಗಂಭೀರವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಪೂರ್ವ ಸಿದ್ಧತೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಅರಣ್ಯ ಇಲಾಖಾಧಿಕಾರಿಗಳೊಂದಿಗೂ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಈ ಬಗ್ಗೆ ಸಭೆ ನಡೆಸಿ ಕಾಡಾನೆ ಹಿಂಡುಗಳನ್ನು ಅರಣ್ಯಕ್ಕಟ್ಟಲು ದೊಡ್ಡ ಮಟ್ಟದ ಕಾರ್ಯಾಚರಣೆ ಅಗತ್ಯವಾಗಿದೆ. ಸಭೆಯಲ್ಲಿ ಪಾಲ್ಗೊಂಡು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು.

ಶ್ರೀಮಂಗಲ ಪೊಲೀಸ್ ಠಾಣೆಗೆ ತೆರಳುವ ಮಾರ್ಗಕ್ಕೆ ಇಲಾಖೆಯಿಂದ ಕಾಂಪೌಂಡ್ ನಿರ್ಮಿಸಿ ಗೇಟು ಹಾಕಲು ಮುಂದಾಗಿರುವ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಈ ಬಗ್ಗೆ ಹಲವಾರು ಸಾರ್ವಜನಿಕರು ತಮ್ಮ ಗಮನಕ್ಕೆ ತಂದಿದ್ದು, ಇದರಿಂದ ರಸ್ತೆ ತಡೆಯಾಗಲಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಶ್ರೀಮಂಗಲ ಗ್ರಾಮ ಸಭೆಯಲ್ಲಿ ಈ ಬಗ್ಗೆ ಇತ್ಯರ್ಥ ಪಡಿಸಲು ಸಲಹೆ ನೀಡಿದರು. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ನಡುವೆ ಈ ರಸ್ತೆಗೆ ಗೇಟು ನಿರ್ಮಿಸುವದರ ಬಗ್ಗೆ ವಿವಾದ ಏರ್ಪಟ್ಟಿದ್ದು, ಗ್ರಾಮ ಸಭೆಯಲ್ಲಿ ಇತ್ಯರ್ಥ ಪಡಿಸಿಕೊಳ್ಳುವವರೆಗೆ ಗೇಟು ನಿರ್ಮಾಣವನ್ನು ತಡೆಹಿಡಿಯುವಂತೆ ಶಿವು ಮಾದಪ್ಪ ಅವರು ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಅವರಿಗೆ ಸೂಚಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಜೆ.ಸಿ. ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ. ಸುಬ್ರಮಣಿ, ಚಟ್ಟಂಗಡ ಅಭೀನ್, ಚೇಂದಂಡ ದೀಪಕ್ ಹಾಜರಿದ್ದರು.