ಸೋಮವಾರಪೇಟೆ,ಜೂ.24: ತಾಲೂಕಿನ ಹೊಸಳ್ಳಿ ಗ್ರಾಮದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೊಸಳ್ಳಿ ಗ್ರಾಮದ ರಮೇಶ್ ಅವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಪಕ್ಕದ ಗ್ರಾಮದ ಕೆಲವರು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದರು. ರಾತ್ರಿ ಗಂಧ ಕಳ್ಳರನ್ನು ಬಿಟ್ಟು ಕಳುಹಿಸಿದ್ದ ಮಾಲೀಕರು ಮಾರನೇ ದಿನ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಹುದುಗೂರು ವಿಭಾಗದ ಅರಣ್ಯ ಇಲಾಖಾ ಸಿಬ್ಬಂದಿಗಳು ಶ್ರೀಗಂಧದ ಮರವನ್ನು ಸಾಗಿಸಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಇದ್ದರೂ ಇದುವರೆಗೂ ಬಂಧಿಸದೇ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಈ ಕ್ರಮ ಕಳ್ಳರಿಗೆ ಇನ್ನಷ್ಟು ಉತ್ತೇಜನ ನೀಡುವಂತಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಶ್ರೀಗಂಧದ ಮರವನ್ನು ಕಡಿದು ಸಾಗಿಸಲು ಯತ್ನಿಸಿದ ಕಳ್ಳರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಪತ್ರಿಕೆಯೊಂದಿಗೆ ಒತ್ತಾಯಿಸಿದ್ದಾರೆ.