ಶ್ರೀಮಂಗಲ, ಜೂ. 27: ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವನ್ಯಪ್ರಾಣಿ ಹಾವಳಿ ಹೆಚ್ಚಾಗಿದ್ದು, ಮಾನವ-ವನ್ಯಪ್ರಾಣಿ ಸಂಘರ್ಷಕ್ಕೆ ಸರಕಾರ ಹಾಗೂ ಜನಪ್ರತಿನಿಧಿಗಳು ಜನರ ಕಣ್ಣೊರೆಸುವ ತಂತ್ರಬಿಟ್ಟು ನೈಜ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದರೆ ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆಹಾನಿ ಹಾಗೂ ಜೀವಹಾನಿ ಉಂಟಾಗಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವದೆ

ಪ್ರಮುಖ ಕಾರಣವಾಗಿದ್ದು ಇನ್ನಾದರೂ ಈ ಬಗ್ಗೆ ಗಮನ ಹರಿಸಲಿ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ಗೋಣಿಕೊಪ್ಪ ಸಿಲ್ವರ್‍ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರುನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ವನ್ಯಪ್ರಾಣಿಯಿಂದ ಮೃತಪಟ್ಟ ಸಂತ್ರಸ್ಥರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಿದರೆ ಸಾಲದು. ಕುಟುಂಬದ ಸದಸ್ಯರಿಗೆ ಸೂಕ್ತ ಸರಕಾರಿ ಉದ್ಯೋಗ, ಅವರ ಮಕ್ಕಳಿಗೆ ಉಚಿತ ವಿದ್ಯಭ್ಯಾಸ ಸೇರಿದಂತೆ ಜೀವನೋಪಾಯಕ್ಕೆ ಸೂಕ್ತ ನೆರವು ನೀಡಬೇಕು. ಕಾಡಾನೆ ಹಾವಳಿ ತಡೆಗಟ್ಟಲು ವಿಶೇಷ ಯೋಜನೆ ರೂಪಿಸಬೇಕು. ಈ ಬಗ್ಗೆ ಅಗತ್ಯವಾದರೆ ಅರಣ್ಯ ಇಲಾಖೆ, ಸರ್ಕಾರ ಬೆಳೆಗಾರರ ಸಲಹೆ ಕೇಳಿದರೆ, ಸೂಕ್ತ ಸಲಹೆ ನೀಡುವದಾಗಿ ತಿಳಿಸಲಾಯಿತು.

ಕಳೆದ 1-2 ವರ್ಷದಿಂದ ಕಾಡಾನೆ ಹಾವಳಿ ಮಿತಿಮೀರಿದ್ದು ದ.ಕೊಡಗಿನ ಅರಣ್ಯದ ಹಾಗೂ ಬೆಳೆಗಾರರ ಜಾಗದ ಮೂಲಕ ಕೇರಳಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗ ಕಾಮಗಾರಿ ನಡೆದ ಸಂದರ್ಭ ಹಾಗೂ ಯೋಜನೆ ಅನುಷ್ಠಾನಗೊಂಡ ನಂತರ ವಿದ್ಯುತ್ ಹರಿಯುವ ಶಬ್ಧಕ್ಕೆ ಗುಂಪಾಗಿದ್ದ ಕಾಡಾನೆಗಳು ಚದುರಿ ಹೋಗಿವೆ. ಇಂತಹ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಹೆಚ್ಚಿನ ಹಾವಳಿ ಮಾಡುತ್ತಿವೆ. ಈ ಯೋಜನೆಯಿಂದ ಕಾಡಾನೆ ಹಾವಳಿ ಹೆಚ್ಚಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನು ಬೆಳೆಗಾರರು ನೀಡಿ ಯೋಜನೆ ತಡೆಗೆ ಹೋರಾಟ ಮಾಡಿದಾಗಲೂ ಅದನ್ನು ನಿರ್ಲಕ್ಷಿಸಿ ತಮ್ಮ ಸ್ವಾರ್ಥಕ್ಕಾಗಿ ಜನಪ್ರತಿನಿಧಿಗಳು ಈ ಯೋಜನೆಗೆ ಬೆಂಬಲ ನೀಡಿದರು. ಅಂತಹ ಜನಪ್ರತಿನಿಧಿಗಳೇ ಈಗ ಕಾಡಾನೆ ಹಾವಳಿಯಿಂದ ಜೀವಹಾನಿ-ಬೆಳೆಹಾನಿ ಉಂಟಾದಾಗ ಜನರ ಕಣ್ಣೊರೆಸುವ ತಂತ್ರವಾಗಿ ಜನರ ಪರ ತೋರ್ಪಡಿಕೆಯ ಕಾಳಜಿ ತೋರಿಸುತ್ತಿದ್ದಾರೆ ಎಂದು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಬಿಡುಗಡೆಯಾಗದ ಸಹಾಯಧನ : ಕಾಫಿ ಮಂಡಳಿ ವತಿಯಿಂದ ಕಾಫಿ ಅಭಿವೃದ್ಧಿ ಹಾಗೂ ಯಾಂತ್ರೀಕರಣ ಯೋಜನೆಯಡಿ 12ನೇ ಪಂಚವಾರ್ಷಿಕ ಯೋಜನೆ ಮೂಲಕ ನೀಡುವ ಸಹಾಯಧನ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಕಳೆದ 6ತಿಂಗಳಿನಿಂದ ತಡೆಯಾಗಿದೆ. ಇದರಿಂದ ಕಾಫಿ ಕಣ, ಗೋದಾಮು, ಪಂಪುಸೆಟ್, ಕೆರೆ, ಯಾಂತ್ರೀಕರಣ ಸೇರಿದಂತೆ ವಿವಿಧ ಕಾಫಿ ಅಭಿವೃದ್ಧಿಗೆ ಬೆಳೆಗಾರರು ಸಲ್ಲಿಸಿರುವ 800 ಅರ್ಜಿಗಳಿಗೆ ಸಹಾಯಧನ ವಿತರಣೆಯಾಗಿಲ್ಲ. ಇದರಿಂದ ಕಾಮಗಾರಿ ಮಾಡಿ ಸಹಾಯಧನದ ನಿರೀಕ್ಷೆಯಲ್ಲಿ ಕಳೆದ 6 ತಿಂಗಳಿನಿಂದ ಇದ್ದಾರೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕೆಂದು ಸಂಸದ ಪ್ರತಾಪ್‍ಸಿಂಹನವರ ಮೂಲಕ ಒತ್ತಾಯಿಸಲು ನಿರ್ಧರಿಸಲಾಯಿತು.

ಸಲ್ಲಿಕೆಯಾಗದ ಅತಿವೃಷ್ಠಿ ಪರಿಹಾರ : 2014-15ರಲ್ಲಿ ಅತಿವೃಷ್ಠಿ ತುತ್ತಾಗಿ ಕಾಫಿಗೆ ಸೇರಿದಂತೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಜಿಲ್ಲಾಡಳಿತ ಸರ್ಕಾರಕ್ಕೆ ಪರಿಹಾರ ಅರ್ಜಿಗಳಿಗೆ ರೂ.22 ಕೋಟಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದ್ಧರೂ, ಇದುವರೆಗೆ ಅನುದಾನ ಬಿಡುಗಡೆಗೊಳ್ಳದ ಕಾರಣ ಪರಿಹಾರ ವಿತರಣೆಯಾಗಿಲ್ಲ. ಕೂಡಲೆ ಈ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಇದಲ್ಲದೆ 2016-17ನೇ ಸಾಲಿನ ಕಾಫಿ ಫಸಲಿಗೆ ಬೇಸಿಗೆಯಲ್ಲಿ ತೀವ್ರ ಬಿಸಿಲು ಹಾಗೂ ಹೂಮಳೆಗೆ ಮಳೆಯ ಅಭಾವದಿಂದ ನೀರಾವರಿ ಸೌಕರ್ಯ ಇಲ್ಲದ ಬೆಳೆಗಾರರ ಶೇ.90ರಷ್ಟು ಹಾಗೂ ನೀರಾವರಿ ಮಾಡಿದ ಬೆಳೆಗಾರರ ಶೇ.50ಕ್ಕಿಂತ ಹೆಚ್ಚು ಕಾಫಿ ನಷ್ಟವಾಗಿದೆ. ಬೇಸಿಗೆಯ ಬರಗಾಲ - ಮಳೆ ಅಭಾವದಿಂದ ಕರಿಮೆಣಸು ಫಸಲಿನ ಮೇಲೂ ದುಷ್ಪರಿಣಾಮ ಬೀರಿದ್ದು ಈ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮ ಮೈಗೊಳ್ಳಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.

ದಲ್ಲಾಳಿಗಳ ಹಾವಳಿ : ಜಿಲ್ಲೆಯ ಕಂದಾಯ ಇಲಾಖೆಯಗಳ ಕಚೇರಿಯಲ್ಲಿ ಸರಿಯಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕಡತ ವಿಲೇವಾರಿಯಾಗುತ್ತಿಲ್ಲ. ಈ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆ ದಲ್ಲಾಳಿಗಳಾಗಿದ್ದು, ತಮ್ಮ ಕರ್ತವ್ಯ ಮಾಡದೇ ಕೆಲವು ಹಣವಂತರ ಕಡತಗಳನ್ನು ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ಹಾಗೂ ಸಾಮಾನ್ಯ ರೈತ ಬೆಳೆಗಾರರ ಕೆಲಸವಾಗುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ದಲ್ಲಾಳಿಗಳಾಗಿ ಮಾರ್ಪಟ್ಟಿರುವದರಿಂದ ತಮ್ಮ ಕಚೇರಿಯಲ್ಲಿ ಲಭ್ಯವಿರುವದಿಲ್ಲ. ಲಂಚ ನೀಡದಿದ್ದರೆ ಯಾವದೇ ಕೆಲಸ ಮಾಡುವದಿಲ್ಲ ಎಂಬಂತಾಗಿದೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಖಜಾಂಚಿ ಮಾಣೀರ ವಿಜಯನಂಜಪ್ಪ, ಸಲಹೆಗಾರ ಚೆಪ್ಪುಡೀರ ಶೆರಿಸುಬ್ಬಯ್ಯ, ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್‍ಮಾದಪ್ಪ, ನಿರ್ದೇಶಕ ಕೈಬುಲಿರ ಹರೀಶ್, ಜಿಲ್ಲಾ ರೈತಸಂಘದ ಸಂಘಟನಾ ಕಾರ್ಯದರ್ಶಿ ಕಳ್ಳಿಚಂಡ ಧನು, ರೈತ ಸಂಘ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಿಮ್ಮಂಗಡ ಗಣೇಶ, ರೈತ ಸಂಘದ ನಿರ್ದೇಶಕ ಚೋನೀರ ಸತ್ಯ, ಮತ್ತಿತರರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.