ಸೋಮವಾರಪೇಟೆ, ಜೂ. 28: ಹಿಂದೂ ಸಮಾಜದ ಮೇಲೆ ಧಾಳಿ ನಡೆಸಲು ಕೊಡಗಿನಲ್ಲಿ ವ್ಯವಸ್ಥಿತ ಸಂಚು ರೂಪುಗೊಂಡಿದೆ. ಸಂಘಟಿತ ಭಯೋತ್ಪಾದನೆ ಮೂಲಕ ಹಿಂದೂ ಸಮಾಜದ ಕಾರ್ಯಕರ್ತರು, ಮುಖಂಡರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಈ ಬಗ್ಗೆ ಹಿಂದೂ ಸಮಾಜ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಬಿಜೆಪಿ ಮುಖಂಡ, ಜಿ.ಪಂ. ಮಾಜೀ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನಕ್ಕೆ ಕೆಲವು ಸಂಘಟನೆಗಳು ಮುಂದಾಗಿವೆ. ತಮ್ಮ ಮೇಲಾದ ದುರಾಕ್ರಮಣವನ್ನು ಪ್ರತಿಭಟಿಸಿದರೆ ಅಂತಹವರ ಮೇಲೆಯೇ ಮೊಕದ್ದಮೆ ದಾಖಲಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಿದವರ ವಿರುದ್ಧವೇ ಕೇಸು ದಾಖಲಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ರಾಜ್ಯವೇ ಅಥವಾ ಸದ್ದಾಂ ಹುಸೇನ್ ಆಡಳಿತವೇ? ಎಂಬ ಸಂಶಯ ಮೂಡುತ್ತಿದೆ ಎಂದು ರವಿಕುಶಾಲಪ್ಪ ಪ್ರಶ್ನಿಸಿದರು.
ಹಿಂದು ಸಮಾಜವನ್ನು ಒಡೆದು ತಮ್ಮ ಬೆಳೆ ಬೇಯಿಸಿಕೊಳ್ಳಲು ಜಾತ್ಯತೀತ ಮುಖವಾಡದ ಪಕ್ಷಗಳು ಹವಣಿಸುತ್ತಿದೆ. ಈ ಬಗ್ಗೆ ಸಮಾಜ ಜಾಗೃತಗೊಳ್ಳಬೇಕಿದೆ. ಸೋಮವಾರಪೇಟೆಯಲ್ಲಿ ಮತಾಂಧ ವ್ಯಕ್ತಿಗಳಿಂದ ಹಿಂದೂಪರ ಸಂಘಟನೆಯ ಮೋಹನ್, ಸತೀಶ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಿದರೆ ಪ್ರತಿಭಟನಾಕಾರರ ವಿರುದ್ಧ ಮೊಕದ್ದಮೆ ದಾಖಲಿಸುತ್ತಿದ್ದಾರೆ. ಇದು ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಧರ್ಮ ರಕ್ಷಣೆಗೆ ನಾವುಗಳೇ ಮುಂದಾಗಬೇಕಿದ್ದು, ಹತ್ತಾರು ಕೇಸು ಜಡಿದರೂ ಹೋರಾಟ ನಿಲ್ಲಿಸುವದಿಲ್ಲ ಎಂದು ಎಚ್ಚರಿಸಿದರು.
ಹಿಂದೂಗಳ ಹಬ್ಬವಾದ ದೀಪಾವಳಿಯಂದೇ ಟಿಪ್ಪುವಿನ ಜನ್ಮದಿನಾಚರಣೆ ಆಚರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕೊಡಗಿನಲ್ಲಿ ಕೋಮು ದ್ವೇಷಕ್ಕೆ ನಾಂದಿ ಹಾಡಿದೆ. ಒಂದು ವರ್ಗದ ತುಷ್ಟೀಕರಣದ ಮೂಲಕ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಹವಣಿಸುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಜಾಗೃತಗೊಳ್ಳಬೇಕಿದೆ ಎಂದರು. ಮುಂದೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಯಾವದೇ ಕಾರಣಕ್ಕೂ ಅವಕಾಶ ಕೊಡುವದಿಲ್ಲ. ಕಳೆದ ಬಾರಿ ಟಿಪ್ಪು ಜಯಂತಿ ದಿನ ನಡೆದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ವರದಿ ಒಪ್ಪಲು ಸಾಧ್ಯವಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಯಾಗಬೇಕು. ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರವಿಕುಶಾಲಪ್ಪ ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯ ಭಾರತೀಶ್ ಮಾತನಾಡಿ, ಜಿಲ್ಲೆಯಲ್ಲಿ ಇಸ್ಲಾಂ ಮೂಲಭೂತವಾದಿಗಳ ಪ್ರಚೋದನೆಯಿಂದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಹಿಂದೊಮ್ಮೆ ಬಿಜೆಪಿ ಜಿಲ್ಲಾಧ್ಯಕ್ಷರ ಕೊಲೆ ಯತ್ನ ನಡೆದಿತ್ತು. ಮೈಸೂರು, ಮಂಗಳೂರು, ವೀರಾಜಪೇಟೆ, ಮಡಿಕೇರಿಯಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ನಿರಂತರವಾಗಿದೆ ಎಂದು ದೂರಿದರು.
ಈ ಹಿಂದೆ ಹೋಸತೋಟದಲ್ಲಿ ಅಪರಿಚಿತರು ಬೀಡುಬಿಟ್ಟಿದ್ದ ಬಗ್ಗೆ ನಾವುಗಳು ಪೊಲೀಸ್ ಇಲಾಖೆಯ ಗಮನಕ್ಕೆ ತಂದ ಸಂದರ್ಭ ಅಪಹಾಸ್ಯ ಮಾಡಿದ್ದರು. ನಂತರದ ದಿನಗಳಲ್ಲಿ ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಆರೋಪಿ ಇಲ್ಲೇ ಬೀಡುಬಿಟ್ಟಿದ್ದುದು ತಿಳಿದುಬಂತು ಎಂದ ಭಾರತೀಶ್, ಈತನಿಂದ ಹಲವರು ತರಬೇತಿ ಪಡೆದಿರುವ ಶಂಕೆ ವ್ಯಕ್ತವಾಗಿದೆ ಎಂದರು. ಪಟ್ಟಣದ ಮೋಹನ್ ಮೇಲಿನ ಹಲ್ಲೆ ಆರೋಪಿ ಕರೀಂಬೇಗ್ ಸಾಮಾಜಿಕ ತಾಣದಲ್ಲಿ ಹಿಂದೂಪರ ಸಂಘಟನೆಗÀಳು ಹಾಗೂ ಹಿಂದು ದೇವತೆಗಳ ಬಗ್ಗೆ ಅವಹೇಳನ ಮಾಡುತ್ತಿದ್ದ. ಆ ಸಂದರ್ಭವೇ ಕಠಿಣ ಕ್ರಮ ಜರುಗಿಸಬೇಕಿತ್ತು. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವ್ಯಕ್ತಿಗಳಿಗೆ ಯಾರೂ ಬೆಂಬಲ ನೀಡಬಾರದು. ಈತನ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಡಿ.ಬಿ. ಧರ್ಮಪ್ಪ, ಜಿ.ಎಲ್. ನಾಗರಾಜು, ಮಣಿ ಕುಮಾರ್ ಉಪಸ್ಥಿತರಿದ್ದರು.