ಸೋಮವಾರಪೇಟೆ,ಜೂ.24: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕೋಮುಗಲಭೆ ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ ನಡೆದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೌನವಾಗುತ್ತವೆ. ಅದೇ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದರೆ ಬೀದಿಗಿಳಿದು ಹೇಳಿಕೆ ನೀಡುತ್ತವೆ. ಹಾಗಾದರೆ ಹಿಂದೂಗಳ ಜೀವಕ್ಕೆ ಬೆಲೆಯಿಲ್ಲವೇ? ಎಂದು ಭಾರತೀಯ ಜನತಾ ಪಾರ್ಟಿ ಪ್ರಶ್ನಿಸಿದೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಸೂರಿನ ರಾಜು, ಉಡುಪಿಯ ಪ್ರಶಾಂತ್ ಪೂಜಾರಿ, ಹುಬ್ಬಳ್ಳಿಯ ಯೋಗೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಹಿಂದೇಟು ಹಾಕುತ್ತಿದೆ. ಇದರ ಭಾಗವೇ ಸೋಮವಾರಪೇಟೆಯ ಗಲಭೆ ಎಂದು ಅಭಿಪ್ರಾಯಿಸಿದರು.
ಕಳೆದ ಒಂದು ವಾರದಿಂದ ಸೋಮವಾರಪೇಟೆ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ರವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಇದುವರೆಗೂ ಪೊಲೀಸ್ ಇಲಾಖೆ ಬಂಧಿಸಿಲ್ಲ. ಗುರುವಾರ ರಾತ್ರಿ ಬಿಜೆಪಿ ಕಾರ್ಯಕರ್ತ ಮಸಗೋಡು ಗ್ರಾಮದ ಕೊಮಾರಿ ಸತೀಶ್ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಸೋಮವಾರಪೇಟೆಯಲ್ಲಿ ದುಷ್ಕøತ್ಯ ನಡೆಸಲು ತಂಡವೊಂದು ಹವಣಿಸುತ್ತಿದೆ. ತಕ್ಷಣವೇ ಈ ತಂಡದ ಆರೋಪಿಗಳನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯನ್ನಾಗಿರಿಸಿಕೊಂಡು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆಯಾದಾಗ ಬೀದಿಗಿಳಿದು ಹಿಂದೂಪರ ಸಂಘಟನೆಗಳ ಮೇಲೆ ಆರೋಪ ಹೊರಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು, ಅದೇ ಹಿಂದೂವಿನ ಮೇಲೆ ಕೊಲೆಯತ್ನ ನಡೆದರೂ ಬಾಯಿಮುಚ್ಚಿಕೊಂಡು ಕುಳಿತಿರುತ್ತಾರೆ. ಹಿಂದೂಗಳ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು.
ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು ಅಲ್ಪಸಂಖ್ಯಾತ ವರ್ಗದವರನ್ನು ಗುತ್ತಿಗೆ ತೆಗೆದುಕೊಂಡವರ ಹಾಗೆ ವರ್ತಿಸುತ್ತಿದೆ. ಹಿಂದೂಗಳ ಮೇಲೆ ಹಲ್ಲೆ ನಡೆದಾಗ ಜಾತ್ಯತೀತ ಸೋಗಿನಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮೌನಕ್ಕೆ ಶರಣಾಗಿದ್ದರು. ಕೇವಲ ಮುಂದಿನ ಚುನಾವಣೆ ದೃಷ್ಟಿಯಿಂದ ಡೋಂಗಿ ಜಾತ್ಯತೀತವಾದಿಗಳು ಮತ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಇಸ್ಲಾಂ ಮೂಲಭೂತವಾದಿ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದ ಅವರು, ಪೊಲೀಸ್ ಇಲಾಖೆಯವರು ಕಾಂಗ್ರೆಸ್ನ ಏಜೆಂಟರಂತೆ ವರ್ತಿಸುವ ಬದಲು ಹಲ್ಲೆ ಆರೋಪಿಗಳನ್ನು ಬಂಧಿಸಲು ಮುಂದಾಗಲಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ನಗರ ಅಧ್ಯಕ್ಷ ಎಸ್.ಆರ್. ಸೋಮೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ಎನ್. ಕೊಮಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ, ಯುವಮೋರ್ಚಾ ಅಧ್ಯಕ್ಷ ಮನುಕುಮಾರ್ ರೈ, ಕಾರ್ಯಕರ್ತ ಹರಗ ಉದಯ ಉಪಸ್ಥಿತರಿದ್ದರು.