ಮಡಿಕೇರಿ, ಜೂ. 16: ಹೋಂ ಸ್ಟೇಗಳ ಹೆಸರಿನಲ್ಲಿ ಕೊಡಗಿನಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಅಕ್ರಮ ದಂಧೆಗಳನ್ನು ನಿಯಂತ್ರಿಸಬೇಕು. ಕಾನೂನಿನ ರಕ್ಷಣೆಗೆ ಸವಾಲಾಗಿರುವ ಇಂತಹ ಕೃತ್ಯಗಳನ್ನು ತಡೆಗಟ್ಟಿ ಇಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಆಡಳಿತಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವರಾದ ಯಂ.ಸಿ. ನಾಣಯ್ಯ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು ಜಿಲ್ಲೆಯ ಯಾವದೇ ಭಾಗದಲ್ಲಿ ಇಂತಹ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡಬಾರದು, ಅನೈತಿಕ ಚಟುವಟಿಕೆ ಅನೈತಿಕವಾಗಿ ಹಲವಾರು ಸ್ಥಳಗಳ ಜೂಜು ಕೇಂದ್ರಗಳಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ಮೂಲಕ ಜಿಲ್ಲೆಯ ನಾಗರಿಕರು ಗೌರವಾನ್ವಿತ ಬದುಕು ಸಾಗಿಸಲು ಅನುವು ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರದ ಸಾರಾಂಶ ಇಂತಿದೆ:
ಶಾಂತಿ ಸೌಹಾರ್ದತೆಯ ವೈಶಿಷ್ಟ್ಯಪೂರ್ಣ ಕೊಡಗು ಜಿಲ್ಲೆಗೆ ಹೊರ ಹಾಗೂ ಪರ ರಾಜ್ಯದವರು ಪ್ರವಾಸಿಗರ ಸೋಗಿನಲ್ಲಿ ಆಗಿಂದಾಗ್ಗೆ ಆಗಮಿಸುತ್ತಿದ್ದಾರೆ.
ಕೊಡಗಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ನೆಪದಲ್ಲಿ ಕಾನೂನು ಬಾಹಿರ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ಹಲವಾರು ಅನಧಿಕೃತ ಹೋಂ ಸ್ಟೇಗಳನ್ನು ತಂಗುದಾಣವನ್ನಾಗಿ ಮಾಡಿಕೊಂಡಿ ರುವ ದಳ್ಳಾಳಿಗಳು ಮತ್ತು ಮಧ್ಯವರ್ತಿಗಳು ಹಾಗೂ ಇತರರು ನಡೆಸುತ್ತಿರುವ ಅನೈತಿಕ ಚಟುವಟಿಕೆಗಳು, ಜೂಜುಗಾರಿಕೆ, ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ವೇಶ್ಯಾವಾಟಿಕೆಗಳಲ್ಲಿ ತೊಡಗಿರು ವಂತಹ ಹೆಣ್ಣುಮಕ್ಕಳ ಜೊತೆಯಲ್ಲಿ ಅನೈತಿಕ ವ್ಯವಹಾರಗಳು ನಡೆಸಲಾಗುತ್ತಿದೆ ಎಂಬದರ ಬಗ್ಗೆ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಸುದ್ದಿಗಳು ಪ್ರಕಟವಾಗುತ್ತಿದ್ದರೂ ಕೂಡ ಇವುಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕೈಗೊಳ್ಳದೆ ಇರುವದರಿಂದ ಇದು ಎಲ್ಲೆ ಮೀರುತ್ತಿದೆ. ಕಾನೂನಿಗೆ ಸವಾಲಾಗಿರುವ ಜಾಲ ಬಹಳ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿರುವದಕ್ಕೆ ಇತ್ತೀಚೆಗೆ ಮಾಧ್ಯಮಗಳಲ್ಲಿ ‘ಕಾಲ್ಗಲ್ರ್ಸ್ ದಂಧೆ' ಎಂದು ಭಿತ್ತರಗೊಂಡ ವರದಿ ಆಘಾತಕಾರಿ ಮತ್ತು ಅಪಾಯಕಾರಿ. ಇದರ ಜೊತೆಯಲ್ಲಿಯೇ ಕರ್ನಾಟಕ ರಾಜ್ಯದ ಹಲವಾರು ಸ್ಥಳಗಳಲ್ಲಿ ನಕ್ಸಲ್ ಗುಂಪಿನವರು ಆಗಿಂದಾಗ್ಗೆ ಕಾಣಿಸಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವದು ಭಯೋತ್ಪಾ ದಕರ ಜೊತೆಯಲ್ಲಿ ಗುರುತಿಸಿಕೊಂಡಿರುವ ಮತ್ತು ಸಂಪರ್ಕ ಇಟ್ಟುಕೊಂಡಿರುವ ಹಲವಾರು ಸಂಶಯಾಸ್ಪದ ವ್ಯಕ್ತಿಗಳು ಕೊಡಗು ಜಿಲ್ಲೆಯಲ್ಲಿರುವ ಇಂತಹ ಹಲವಾರು ಅನಧಿಕೃತ ಮತ್ತು ಕಾನೂನು ಬಾಹಿರ ತಂಗುದಾಣಗಳನ್ನು ತಮ್ಮ ಕೃತ್ಯಗಳಿಗೆ ಸದ್ದು - ಗದ್ದಲವಿಲ್ಲದೆ ಬಳಸಿ ಕೊಳ್ಳುತ್ತಿರುವ ಸಂಶಯವು ಇರಬಹುದೆಂಬದರ ಬಗ್ಗೆ ಹಲವು ಸುದ್ದಿಗಳು ಪ್ರಕಟವಾಗಿದೆ.
ಕಾನೂನಿನ ರಕ್ಷಣೆಗೆ ಸವಾಲಾಗಿರುವ ಈ ಒಂದು ಪ್ರಕರಣದ ಬಗ್ಗೆ ಇದರ ಮೂಲವನ್ನು ಹುಡುಕಲು ತನಿಖೆಗೆ ಆದೇಶಿಸಿರುವದು ಸ್ವಾಗತಾರ್ಹವಾಗಿದೆ. ಈ ಪ್ರಕರಣಗಳಿಗೆ ಸಂಬಂಧಪಟ್ಟ ಹಾಗೆ ಈ ಹಿಂದೆ ಹಲವು ಬಾರಿ ಹಿಂದಿನ ಜಿಲ್ಲಾಧಿಕಾರಿಗಳಿಗೂ ಮತ್ತು ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪತ್ರಗಳನ್ನು ಬರೆದು ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಜಿಲ್ಲೆಯ ಕಾನೂನಿನ ಹಿತದೃಷ್ಟಿಯಿಂದ ಮತ್ತು ಸಮಾಜದಲ್ಲಿ ಶಾಂತಿ - ನೆಮ್ಮದಿಯನ್ನು ಕಾಪಾಡುವ ಏಕೈಕ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದ್ದಾಗಿಯೂ ಅವರು ನೆನಪಿಸಿದ್ದಾರೆ.
ಅನಧಿಕೃತ ಹೋಂ ಸ್ಟೇಗಳ ನಿಯಂತ್ರಣದ ಬಗ್ಗೆ ಅಂದಿನ ಹೋಂ ಸ್ಟೇಗಳಲ್ಲಿ ನಡೆಯುತ್ತಿದೆ ಎನ್ನಲಾದ ಎಲ್ಲಾ ತರಹದ ಕಾನೂನು ಬಾಹಿರ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಾದ ತಾವು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾದ ವಿಧಾನಗಳ ಬಗ್ಗೆಯೂ ಸವಿವರವಾಗಿ ವಿವರಿಸುವದರ ಮೂಲಕ ಅವರು ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದಿದ್ದಾರೆ. ಎಲ್ಲಾ ವಿಚಾರಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಿಂದ ನಡೆಯುತ್ತಿದೆ ಎನ್ನಲಾಗಿರುವ ಮತ್ತು ಕಾನೂನಿನ ರಕ್ಷಣೆಗೆ ಸವಾಲಾಗಿರುವ ಇಂತಹ ಎಲ್ಲಾ ತರಹದ ದಂಧೆಗಳನ್ನು ಕೂಡಲೇ ನಿಯಂತ್ರಿಸಿ ಅವಶ್ಯವಿದ್ದಲ್ಲಿ ಅಂತಹ ಎಲ್ಲಾ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.