ಸೋಮವಾರಪೇಟೆ,ಜು.೬: ಜಿಲ್ಲೆಯ ಕೃಷಿಕರನ್ನು ಕಾಡುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಕಾನೂನು ಮೂಲಕವೇ ರಾಜ್ಯ ಸರ್ಕಾರದ ಗಮನ ಸೆಳೆದು ತಾರ್ಕಿಕ ಅಂತ್ಯ ನೀಡುವ ಉದ್ದೇಶದಿಂದ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಬಳಿಗೆ ನಿಯೋಗ ತೆರಳಿ ದಾಖಲೆ ಗಳನ್ನು ಒದಗಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಉಪಸ್ಥಿತಿಯೊಂದಿಗೆ ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ನೇತೃತ್ವದಲ್ಲಿ ತೆರಳಿದ ನಿಯೋಗವು, ಅಡ್ವೋಕೇಟ್ ಜನರಲ್ ಸಿ.ಕೆ. ಶಶಿಕಿರಣ್ ಶೆಟ್ಟಿ ಅವರನ್ನು ಹೈಕೋರ್ಟ್ನಲ್ಲಿ ಭೇಟಿ ಮಾಡಿ ವಾಸ್ತವಾಂಶದ ವರದಿ ಒಪ್ಪಿಸಿತು.
ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಮುಳಗಡೆಯಾದ ಪ್ರದೇಶಕ್ಕೆ ಪರ್ಯಾಯವಾಗಿ ಕೊಡಗಿನಲ್ಲಿಯೇ ಅರಣ್ಯ ಇಲಾಖೆಗೆ ಭೂಮಿ ಒದಗಿಸುವ ನಿರ್ಧಾರ ಅವೈಜ್ಞಾನಿಕ. ಹಾರಂಗಿ ಜಲಾಶಯ ನಿರ್ಮಾಣ ದಿಂದ ಕೊಡಗಿನ ಕೆಲವೇ ಗ್ರಾಮಗಳಿಗೆ ಮಾತ್ರ ಉಪಯೋಗವಾಗಿದ್ದರೆ, ಹೊರ ಜಿಲ್ಲೆಗಳಿಗೆ ಯಥೇಚ್ಛ ಪ್ರಮಾಣದಲ್ಲಿ ಉಪಯೋಗವಾಗುತ್ತಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಗೆ ಹೊರ ಜಿಲ್ಲೆಗಳಲ್ಲಿಯೇ ಭೂಮಿ ಒದಗಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಲಾಯಿತು.
ಸಿ&ಡಿ, ಸೆಕ್ಷನ್ ೪ ಹಾಗೂ ಹಾರಂಗಿ ಮುಳುಗಡೆ ಜಮೀನಿನ ಬಗ್ಗೆ ಕೂಲಂಕುಶವಾಗಿ ವಿವರಿಸಿದ ಪದಾಧಿಕಾರಿಗಳು, ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ಕಂದಾಯ ಇಲಾಖೆಯಿಂದ ಆಗಿರುವ ದೋಷಗಳು ಹಾಗೂ ಅರಣ್ಯ ಇಲಾಖೆಯಿಂದ ರೈತರಿಗೆ ಆಗುತಿರುವ ತೊಂದರೆಗಳು, ಕಂದಾಯ ಇಲಾಖೆಯವರು ವೈಜ್ಞಾನಿಕವಾಗಿ ಸರ್ವೇ ಮಾಡದೇ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸವಿಸ್ತಾರವಾದ ವರದಿ ನೀಡಲಾಯಿತು.
ಈಗಾಗಲೇ ಅನೇಕ ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಸರ್ಕಾರಿ ಜಮೀನಿನ ದಾಖಲೆಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಸಿ ಮತ್ತು ಡಿ ಜಾಗ ಎಂದು ದಾಖಲೆಗಳನ್ನು ನೀಡುತ್ತಿಲ್ಲ. ಇದೀಗ ಇಂತಹ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರ ಜೀವನ ಬೀದಿಗೆ ಬರಲಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಗಮನ ಸೆಳೆದರು.
ಸಮಿತಿಯ ದಾಖಲೆಗಳನ್ನು ಸ್ವೀಕರಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾತನಾಡಿ, ಸಮಿತಿ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುವುದು. ತಾ. ೧೦ರಂದು ಈ ಸಂಬAಧಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಹಿಂದಿನ ಸರ್ಕಾರಗಳ ಆದೇಶವನ್ನು ಪುನರ್ಪರಿಶೀಲಿಸುವ ಅಗತ್ಯದ ಬಗ್ಗೆಯೂ ಮನವರಿಕೆ ಮಾಡಿ ಕೊಡಲಾಗುವುದು. ರೈತರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ರೈತ ಹೋರಾಟ ಸಮಿತಿಯ ಪ್ರಸಿ ಗೌಡಳ್ಳಿ, ದಿವಾಕರ್ ಕೂತಿ, ಮಿಥುನ್ ಹರಗ ಅವರುಗಳು ಉಪಸ್ಥಿತರಿದ್ದರು.