ಗೋಣಿಕೊಪ್ಪಲು, ಜು.೭: ಮಾಯಮುಡಿ, ತಿತಿಮತಿ, ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದ ಬೇಸತ್ತ ಇಲ್ಲಿನ ಕಾಫಿ ಬೆಳೆಗಾರರು ಹಾಗೂ ರೈತರು ಒಟ್ಟಾಗಿ ಸೇರಿ ಸಭೆ ನಡೆಸುವ ಮೂಲಕ ಕಾಡಾನೆ ಉಪಟಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸಭೆಗೆ ಆಗಮಿಸಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಸಭೆಯಲ್ಲಿ ಭಾಗವಹಿಸಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.
ಅರಣ್ಯ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ನಿರ್ಲಕ್ಷö್ಯ ಹಾಗೂ ನಿರುತ್ಸಾಹದಿಂದ ಗ್ರಾಮದಲ್ಲಿ ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ. ಕಾಡಾನೆಗಳು ಅರಣ್ಯದಿಂದ ಬರುವುದನ್ನು ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಈ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣನವರಿಗೆ ಸಮಸ್ಯೆ ಬಗ್ಗೆ ವಿವರ ನೀಡಲಾಗಿದೆ.
ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷö್ಯ ತೋರುವ ಯಾವುದೇ ಅಧಿಕಾರಿಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸದೆ ತಮಗೆ ಬೇಕಾದ ಊರುಗಳಿಗೆ ವರ್ಗಾವಣೆ ತೆಗೆದುಕೊಳ್ಳಬಹುದು. ಇಲ್ಲಿಯ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಅಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸಿದರೆ ಸಾಕು, ಈಗಾಗಲೇ ವನ್ಯಜೀವಿ ಮಂಡಳಿ ಸದಸ್ಯನಾಗಿ ೧ ವರ್ಷವನ್ನು ಪೂರೈಸಿದ್ದೇನೆ. ಇಲಾಖೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಅರಿತಿದ್ದೇನೆ. ಕೆಲವೇ ಕೆಲವು ಮಂದಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈಗಾಗಲೇ ಕ್ಷೇತ್ರದ ಶಾಸಕ ಪೊನ್ನಣ್ಣ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಇದರ ಕೆಲಸ ಆರಂಭವಾದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಅಲ್ಲಿಯ ತನಕ ಸಾರ್ವಜನಿಕರು ಸ್ಪಂದಿಸಬೇಕು. ಹಲವು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಗೊಳಿಸುವ ಪ್ರಸ್ತಾವನೆಯು ಕೂಡ ಸರ್ಕಾರದ ಮುಂದಿದೆ.
ಕಾಡಾನೆಯ ವಿಚಾರದಲ್ಲಿ ಸಂಸದರೊAದಿಗೆ ಸದ್ಯದಲ್ಲಿಯೇ ಸಭೆ ನಡೆಸಿ ಅವರ ಸಹಕಾರವನ್ನು ಪಡೆಯುತ್ತೇವೆ. ಶಾಸಕ ಪೊನ್ನಣ್ಣನವರ ವಿಶೇಷ ಕಾಳಜಿಯಿಂದ ಕೊಡಗಿನಲ್ಲಿ ವಿಶೇಷ ಕಾರ್ಯಪಡೆ ರಚನೆ ಮಾಡಲು ಪ್ರಯತ್ನಗಳು ಮುಂದುವರೆಯುತ್ತಿವೆ. ಪೊಲೀಸ್ ಹಾಗೂ ಸೈನಿಕನ ಮಾದರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆಲಸ ನಿರ್ವಹಿಸಬೇಕು.
ಇದರಿಂದ ಮಾತ್ರ ಕಾಡಾನೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ತರಬಹುದು. ಮುಂದಿನ ಸಾಲಿನಲ್ಲಿ ಸಾಫ್ಟ್ ರಿಲೀಸ್ ಏರಿಯಾ ೨ ಸಾವಿರ ಏಕರೆ ಜಾಗದಲ್ಲಿ ಆಗಲಿದೆ. ಜಾಗ ಗುರುತಿಸುವಿಕೆ ಪ್ರಗತಿಯಲ್ಲಿದೆ. ವೀರಾಜಪೇಟೆ ಕ್ಷೇತ್ರದ ೯ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾಗೂ ಹುಲಿಗಳ ಉಪಟಳ ಅಧಿಕವಿದೆ.
ಈ ಹಿಂದೆ ನಿರ್ಮಾಣ ಮಾಡಿದ ಕಂದಕಗಳು ನಿರ್ವಹಣೆ ಇಲ್ಲದೆ ಸಮಸ್ಯೆ ಉಲ್ಬಣಗೊಂಡಿದೆ. ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರವಿರುವುದು ಕಂಡು ಬಂದಿದೆ. ಸೂಕ್ತ ಸಮಯದಲ್ಲಿ ಇಂತಹವುಗಳಿಗೆ ಉತ್ತರ ನೀಡಲಿದ್ದೇನೆ. ಗ್ರಾಮಸ್ಥರ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡದ ಅಧಿಕಾರಿಗಳ ಮೇಲೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಇಲ್ಲಿಯ ಗಂಭೀರ ಸಮಸ್ಯೆಯನ್ನು ಇಲಾಖಾಧಿಕಾರಿಗಳು ಮೇಲಿನ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿರುವುದು ಕಂಡು ಬಂದಿದೆ. ಕಾಡಾನೆಗಳನ್ನು ನಿಯಂತ್ರಣ ಮಾಡುವ ಸಲುವಾಗಿ ಎಲ್ಲಾ ರೀತಿಯ ಕ್ರಮಗಳು ತಕ್ಷಣದಿಂದಲೇ ಆಗಬೇಕೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷರಾದ ಸಣ್ಣುವಂಡ ರಮೇಶ್ ಅಧ್ಯಕ್ಷತೆಯಲ್ಲಿ ಮಾಯಮುಡಿಯ ಕಮಟೆ ಈಶ್ವರ ದೇವಾಲಯದ ಆವರಣದಲ್ಲಿ ಅರಣ್ಯಾಧಿಕಾರಿಗಳ ಹಾಗೂ ಸ್ಥಳೀಯ ರೈತರ ಹಾಗೂ ಬೆಳೆಗಾರರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಕಾಡಾನೆಯನ್ನು ಏಕ ಕಾಲದಲ್ಲಿ ಗ್ರಾಮದಿಂದ ಅರಣ್ಯಕ್ಕೆ ಅಟ್ಟುವುದು ಹಿರಿಯ ಅಧಿಕಾರಿಗಳ ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸುವುದು ಕಾಡಾನೆಗಳು ಅರಣ್ಯದಿಂದ ಬರುವ ಕುಂಞÂರಾಮನಕಟ್ಟೆ ಬಳಿ ಇರುವ ಬ್ಯಾರಿಕೇಡ್ ಬಂದ್ ಮಾಡುವುದು. ಕೆಲವು ಭಾಗದಲ್ಲಿ ಗಸ್ತು ಹೆಚ್ಚಿಸುವುದು, ರಾತ್ರಿಯ ವೇಳೆ ಬರುವ ಆನೆಗಳನ್ನು ಅಲ್ಲಿಯೇ ನಿಯಂತ್ರಿಸುವುದು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಕಮಟೆ ಈಶ್ವರ ದೇವಾಲಯದ ಅಧ್ಯಕ್ಷರಾದ ಸಣ್ಣುವಂಡ ರಮೇಶ್ ಮಾತನಾಡಿ, ಗ್ರಾಮದ ಸಮಸ್ಯೆಗಳನ್ನು ಈ ಹಿಂದೆ ಹಲವು ಬಾರಿ ಲಿಖಿತ ರೂಪದಲ್ಲಿ ಅಧಿಕಾರಿಗಳಿಗೆ ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲ. ಸುತ್ತಮುತ್ತಲಿನಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿವೆ. ಇದರಿಂದ ರೈತರು ಕಾಫಿ ತೋಟಕ್ಕೆ ತೆರಳಲು ಮುಂದಾಗುತ್ತಿಲ್ಲ. ಭತ್ತದ ಗದ್ದೆಗಳಲ್ಲಿ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಡಾನೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲು ತೀರ್ಮಾನ ಕೈಗೊಂಡ ಹಿನ್ನಲೆಯಲ್ಲಿ ಸಭೆ ನಡೆಸುತ್ತಿದ್ದೇವೆ ಎಂದು ಗಮನ ಸೆಳೆದರು.
ಸಭೆಯಲ್ಲಿ ಹಾಜರಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ ಸರ್ಕಾರದ ವತಿಯಿಂದ ಅರಣ್ಯ ಇಲಾಖೆಗೆ ಕೋಟ್ಯಾಂತರ ಅನುದಾನವು ಮಂಜೂರಾಗಿದ್ದರು ಇದರಲ್ಲಿ ಇಲಾಖೆಯು ಅಳವಡಿಸುವ ಸೋಲಾರ್ ಬೇಲಿಯು ನಿರ್ವಹಣೆ ಇಲ್ಲದೆ ಪ್ರತಿ ವರ್ಷ ಮಾಡಿದ ವರ್ಷವು ಪ್ರಯೋಜನಕ್ಕೆ ಬರುತ್ತಿಲ್ಲ. ಕಾಡಾನೆಗಳು ಸೋಲಾರ್ ಬೇಲಿಗಳನ್ನು ಮುರಿದು ಬರುತ್ತಿವೆ.
ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ಅಳವಡಿಸುವ ಸೋಲಾರ್ ಬೇಲಿಗಳು ಮೂರು ನಾಲ್ಕು ವರ್ಷಗಳು ಯಾವುದೇ ಅಡೆತಡೆಗಳಿಲ್ಲದೆ ಕೆಲಸ ನಿರ್ವಹಿಸುತ್ತವೆ. ಇಲಾಖೆಯಲ್ಲಿ ಇದು ಯಾಕೆ ಸಾಧ್ಯವಿಲ್ಲ.? ಗ್ರಾಮದಲ್ಲಿರುವ ೨೦ಕ್ಕೂ ಹೆಚ್ಚು ಆನೆಗಳನ್ನು ಸ್ಥಳಾಂತರ ಮಾಡಿಸುವುದೇ ಉತ್ತಮ. ಹಲವೆಡೆ ಬ್ಯಾರಿಕೇಡ್‌ಗಳನ್ನು ಇನ್ನೂ ಕೂಡ ಅಳವಡಿಸದೆ ಇರುವುದರಿಂದ ಕಾಡಾನೆಗಳು ಆ ಭಾಗದಿಂದ ಬರುತ್ತಿವೆ. ಮರಪಾಲದ ಬಳಿ ಅರಣ್ಯಕ್ಕೆ ಹೋಗುವ ಜಾಗದಲ್ಲಿ ವಸತಿ ಗೃಹವನ್ನು ನಿರ್ಮಿಸಿ ಅಲ್ಲಿಗೆ ಸಿಬ್ಬಂದಿಗಳನ್ನು ನೇಮಕಗೊಳಿಸಿದಲ್ಲಿ ರಾತ್ರಿ ವೇಳೆ ಅರಣ್ಯದಿಂದ ಬರುವ ಕಾಡಾನೆಗಳನ್ನು ಅಲ್ಲಿಯೇ ನಿಯಂತ್ರಿಸಬಹುದು. ತಕ್ಷಣ ಈ ಭಾಗದಲ್ಲಿ ಪಹರೆ ಕಾರ್ಯ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಡಾ.ಚೆಪ್ಪುಡಿರ ಕುಶಾಲಪ್ಪ ಮಾತನಾಡಿ ಕಾಡಾನೆಗಳ ಉಪಟಳದಿಂದ ರೈತರು ಬೆಳೆಗಾರರು ಭತ್ತ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಂದೆ ಇಂತಹ ಭೂಮಿಗಳು ಹಾಳಾಗಲಿದೆ ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ನಿಯಂತ್ರಿಸಲು ಇಲಾಖೆಯು ಕ್ರಮ ಕೈಗೊಳ್ಳಬೇಕು. ಗುಂಪಿನೊAದಿಗೆ ಬರುವ ಕಾಡಾನೆಗಳು ಕೆಲ ದಿನಗಳ ನಂತರ ವಿವಿಧ ಗುಂಪುಗಳಾಗಿ ಬೇರೆ ಬೇರೆ ಕಡೆಗೆ ತೆರಳುತ್ತಿವೆ. ಇದರಿಂದ ಎಲ್ಲೆಡೆ ಸಮಸ್ಯೆ ಎದುರಾಗಿದೆ. ಏಕ ಕಾಲದಲ್ಲಿ ಎಲ್ಲರು ಸೇರಿ ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಆಗಬೇಕು. ಇದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದರು.
ಸಭೆಯಲ್ಲಿದ್ದ ತಿತಿಮತಿ ವಲಯದ ಎಸಿಎಫ್ ಗೋಪಾಲ್ ಮಾತನಾಡಿ,ಈಗಾಗಲೇ ಕಾಡಾನೆಗಳ ನಿಯಂತ್ರಣಕ್ಕೆ ಹಲವೆಡೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿರುವ ಜಾಗದಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳ್ಳದಿರುವುದರಿಂದ ಈ ಭಾಗದಿಂದ ಕಾಡಾನೆಗಳು ಗ್ರಾಮಕ್ಕೆ ಆಗಮಿಸುತ್ತಿವೆ. ಮುಂದುವರೆದ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ. ಕಾಡಾನೆಗಳು ಬರುವ ಜಾಗವನ್ನು ಸೋಲಾರ್ ಬೇಲಿಗಳಿಂದ ಹಾಗೂ ಕಂದಕಗಳಿAದ ನಿಯಂತ್ರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ವನ್ಯಜೀವಿ ವಿಭಾಗದ ಆರ್‌ಎಫ್‌ಒ ದೇವರಾಜ್ ಮಾತನಾಡಿ ಕೆಲವು ಭಾಗದಲ್ಲಿ ಕಂದಕ ನಿರ್ಮಾಣಗೊಂಡಿದ್ದರೂ ಮಣ್ಣಿನ ಸಮಸ್ಯೆಯಿಂದಾಗಿ ಆಗಿಂದ್ದಾಗೆಯೇ ಕುಸಿದು ಬೀಳುತ್ತಿವೆ. ಸೋಲಾರ್ ಬೇಲಿಗಳ ನಿರ್ವಹಣೆಗೆ ಕ್ರಮಕೈಗೊಳ್ಳುತ್ತಿದ್ದೇವೆ.ಕಾಡಾನೆ ನಿಯಂತ್ರಣಕ್ಕೆ ಬೇಕಾದ ರೀತಿಯಲ್ಲಿ ಕ್ರಮ ನಡೆಯುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರಥ್ವಿ ಕೆಲವು ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಆನೆ ಕಂದಕಗಳು ಉತ್ತಮ ರೀತಿಯಲ್ಲಿವೆ. ನಮ್ಮ ಭಾಗದಲ್ಲಿ ನಿರಂತರವಾಗಿ ಸಮಸ್ಯೆಯಾಗುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಸಭೆಯಲ್ಲಿ ಹಲವು ಹಿರಿಯ ರೈತರು ಹಾಗೂ ಬೆಳೆಗಾರರು ಕಾಡಾನೆಗಳ ಉಪಟಳದಿಂದ ತಮಗಾದ ನಷ್ಟವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು. ರೈತರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಸಭೆಗೆ ತಿಳಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ಕಾಡಾನೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.
ವ್ಯಾಟ್ಸಾಪ್ ಗ್ರೂಪ್
ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ವಹಣೆಯಲ್ಲಿ ನೂತನ ವ್ಯಾಟ್ಸಾಪ್ ಗ್ರೂಪ್ ರಚನೆಯಾಗಬೇಕು. ಅದರಲ್ಲಿ ಗ್ರಾಮಗಳ ಸದಸ್ಯರು ತಮ್ಮ ಭಾಗದಲ್ಲಿ ಕಾಡಾನೆಗಳಿಂದ ಆಗುವ ಸಮಸ್ಯೆಗಳನ್ನು ತಿಳಿಸಬಹುದು. ಹಿರಿಯ ಅಧಿಕಾರಿಗಳು ಈ ಬಗ್ಗೆ ಕುಳಿತಲ್ಲಿಯೇ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ನೂತನ ವ್ಯಾಟ್ಸಾಪ್ ಗ್ರೂಪ್ ರಚನೆ ಮಾಡಿ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಚೆಪ್ಪುಡಿರ ಕಾರ್ಯಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.ಸಭೆಯಲ್ಲಿ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ತಿತಿಮತಿ ವಲಯದ ಆರ್‌ಎಫ್‌ಒ ಗಂಗಾಧರ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು. ಸಭೆಯ ಆಯೋಜಕರಾದ ಚೆಪ್ಪುಡಿರ ಕಾರ್ಯಪ್ಪ ಸ್ವಾಗತಿಸಿ ಸಣ್ಣುವಂಡ ರಮೇಶ್ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು.
-ಹೆಚ್.ಕೆ. ಜಗದೀಶ್