ಸಿದ್ದಾಪುರ, ಜು. ೭: ಕಾಡಾನೆಗಳ ಕಾರ್ಯಾಚರಣೆ ಸಂದರ್ಭ ವಿದ್ಯುತ್ ತಂತಿ ನೆಲಕ್ಕೆ ಬಿದ್ದ ಪರಿಣಾಮ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಲಯ ಅರಣ್ಯ ಅಧಿಕಾರಿ ಶಿವರಾಂ ಮತ್ತು ಸಿಬ್ಬಂದಿ ಹಾಗೂ ಕಾಡಾನೆ ಗುಂಪಿನಲ್ಲಿದ್ದ ಮರಿಯಾನೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ಅಮ್ಮತ್ತಿ ಒಂಟಿಅAಗಡಿ ಬಳಿ ನಡೆದಿದೆ.

ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ವಲಯ ವ್ಯಾಪ್ತಿಗೆ ಒಳಪಡುವ ಕಣ್ಣಂಗಾಲ ಗ್ರಾಮ ಹಾಗೂ ಬೈರಂಬಾಡ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

ಸೋಮವಾರದಂದು ಕಾರ್ಯಾಚರಣೆ ನಡೆಸುವ ಸಂದರ್ಭ ಕಾಫಿ ತೋಟದೊಳಗಿನಿಂದ ಕಾಡಾನೆಗಳ ಹಿಂಡು ಕಾಡಿನತ್ತ ತೆರಳುವ ಸಂದರ್ಭ ಹಳೆಯ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದೆ.

ಈ ಸಂದರ್ಭ ಕಾಡಾನೆಗಳ ಹಿಂಡಿನಲ್ಲಿ ಇದ್ದ ಮರಿಯಾನೆಯೊಂದು ತಂತಿಗೆ ಸಿಲುಕಿ ಕೆಳಕ್ಕೆ ಬಿದ್ದಿದ್ದು, ವಲಯ ಅರಣ್ಯ ಅಧಿಕಾರಿ ಶಿವರಾಂ ತಕ್ಷಣವೇ ವಿದ್ಯುತ್ ಇಲಾಖೆಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಇದರಿಂದಾಗಿ ಮರಿಯಾನೆ ಪ್ರಾಣಾಪಾಯದಿಂದ ಪಾರಾಗಿದೆ. ಅಲ್ಲದೆ ವಿದ್ಯುತ್ ತಂತಿ ಬೀಳುವ ಸಂದರ್ಭ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಕೂಡ ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ.

ಇದಲ್ಲದೆ ಕಾರ್ಯಾಚರಣೆ ಸಂದರ್ಭ ಕಾಡಾನೆಗಳ ಗುಂಪಿನಲ್ಲಿದ್ದ ಸಲಗವೊಂದು ಕಾರ್ಯಾಚರಣೆ ತಂಡದ ಉಪವಲಯ ಅಧಿಕಾರಿ ಸಂಜೀತ್ ಸೋಮಯ್ಯ ಹಾಗೂ ಆನೆ ಕಾರ್ಯಪಡೆಯ ಸಿಬ್ಬಂದಿ ಪೊನ್ನಣ್ಣ ಎಂಬವರ ಮೇಲೆ ಎರಡು ಬಾರಿ ದಾಳಿ ನಡೆಸಲು ಮುಂದಾದ ಘಟನೆಯೂ ನಡೆಯಿತು.

ಕಾಡಾನೆಗಳ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಕಾರ್ಯಾಚರಣೆ ತಂಡಕ್ಕೆ ಸವಾಲು ಎದುರಾಯಿತು. ಸುರಿಯುವ ಮಳೆಯ ನಡುವೆ ಕಾರ್ಯಾಚರಣೆ ತಂಡವು ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ ವಲಯ ಅರಣ್ಯ ಅಧಿಕಾರಿ ಶಿವರಾಂ ಮಾಹಿತಿ ನೀಡಿ ವಿದ್ಯುತ್ ತಂತಿ ಬಿದ್ದ ವೇಳೆ ಚೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದೆ. ತಕ್ಷಣವೇ ಸ್ಪಂದಿಸಿದ ಚೆಸ್ಕಾಂ ಅಧಿಕಾರಿಗಳು ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಲಿಲ್ಲ ಎಂದರು.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಂಜೀತ್ ಸೋಮಯ್ಯ, ರಾಘವ, ದೇವರಾಜ್, ಶ್ರೀನಿವಾಸ್, ಲೋಕೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಕಾರ್ಯಪಡೆ ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. - ವಾಸು