ಕುಶಾಲನಗರ, ಜು. ೮ : ಕುಶಾಲನಗರ ಪಟ್ಟಣದಲ್ಲಿನ ರಾಜ ಕಾಲುವೆಗಳ ಸಂಬAಧ ಸರ್ವೆ ಕಾರ್ಯ ಮಾಡಿಸಿ ಕೂಡಲೇ ಒತ್ತುವರಿ ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಮಂತರ್ ಗೌಡ ಸೂಚನೆ ನೀಡಿದರು.
ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷಿö್ಮಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯ ಕಲಿಮುಲ್ಲಾ ಮಾತನಾಡಿ, ಸಾಯಿ ಬಡಾವಣೆಗೆ ಹೋಗುವ ರಸ್ತೆ ಬಳಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭ ಪುರಸಭೆ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಕೈಗೊಂಡು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಶಾಸಕರು ನಿರ್ದೇಶನ ನೀಡಿದರು.
ಪಟ್ಟಣದ ಒಳಚರಂಡಿ ಕಾಮಗಾರಿಯ ಲೋಪದೋಷದ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿ ವಸ್ತುಸ್ಥಿತಿ ಏನು ಯಾವಾಗ ನೀವು ಪೂರ್ಣಗೊಳಿಸುತ್ತಿರಿ ಎಂದು ಶಾಸಕರು ಜಲಮಂಡಳಿ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದಾಗ ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿದೆ, ಪ್ರತಿ ಮನೆಗಳಿಗೆ ಸಂಪರ್ಕ ಹಾಗೂ ನಿರ್ವಹಣೆ ಮಾಡಬೇಕಾಗಿದೆ. ಇದಕ್ಕಾಗಿ ಮೂರು ತಿಂಗಳಿಗೆ ರೂ.೧೨ ಲಕ್ಷ ಹಣವನ್ನು ಪುರಸಭೆ ಒದಗಿಸಿಕೊಡಬೇಕು ಎಂದರು.
ಕಾಮಗಾರಿಯೇ ಮುಗಿಯದೆ ನಿರ್ವಹಣೆ ಬಗ್ಗೆ ಚರ್ಚೆ ಅಗತ್ಯವಿಲ್ಲ. ಮೊದಲು ಒಳಚರಂಡಿ ಯೋಜನೆಗೆ ಚಾಲನೆ ನೀಡಿ, ಸದಸ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಯೋಜನೆ ಕಾಮಗಾರಿಯನ್ನು ಸರಿಯಾಗಿ ಮಾಡಿಲ್ಲ. ಸರ್ಕಾರದ ಹಣ ಪೋಲಾಗಿದೆ. ಈಗ ಆಗಿರುವ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಈ ಹಿಂದೆಯೇ ನಿರ್ಣಯ ಕೂಡ ಮಾಡಲಾಗಿದೆ ಎಂದು ಹೇಳಿದರು. ಯುಜಿಡಿ ಕಾಮಗಾರಿ ಮತ್ತು ಅಧಿಕಾರಿಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ಗುರಿ ಇಟ್ಟುಕೊಂಡು ಸರಕಾರ ನೀಡಿರುವ ಯೋಜನೆಯ ದುರುಪಯೋಗ ಆಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕೋಟ್ಯಂತರ ರೂಪಾಯಿ ಅನುದಾನ ಅನಾವಶ್ಯಕ ದುರುಪಯೋಗ ಆಗಬಾರದು. ಮುಂದಿನ ಅಕ್ಟೋಬರ್ ಒಳಗೆ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಕ್ತಾಯದ ವರದಿ ಸಲ್ಲಿಸುವಂತೆ ಶಾಸಕರು ಸೂಚನೆ ನೀಡಿದರು.
ಉದ್ಯಾನವನಗಳ ಅಭಿವೃದ್ಧಿ, ಕುಶಾಲನಗರ -ಕೊಪ್ಪ ಹಳೆಯ ಸೇತುವೆ ಹಾಗೂ ಹೊಸ ಸೇತುವೆ ದುರಸ್ತಿ ಪಡಿಸುವಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಶಾಸಕರು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ, ಸೇತುವೆ ದುರಸ್ತಿ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಇಂಜಿನಿಯರ್ ಸೂಚಿಸಿದರು. ಶಾಸಕರ ರೂ. ೫ ಲಕ್ಷ ಅನುದಾನದಲ್ಲಿ ಹಳೆಯ ಸೇತುವೆಯ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು. ಕೊಪ್ಪ ಗೇಟ್ನಿಂದ ತಾವರೆಕೆರೆವರೆಗೆ ಪಾದಚಾರಿ ಮಾರ್ಗ ಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.
ಸದಸ್ಯ ಜಯ ವರ್ಧನ್, ಶಿವಶಂಕರ್ ಮಾತನಾಡಿ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಪ್ರಥಮ ದರ್ಜೆ ಕಾಲೇಜು ಹಿಂಭಾಗ ಇರುವ ಎರಡು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ೧೨ ಮಂದಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಉಳಿದ ಒಂದು ಎಕರೆ ವಿಸ್ತೀರ್ಣದ ಪ್ರದೇಶವನ್ನು ಮುಳ್ಳುಸೋಗೆ ಗ್ರಾಮಕ್ಕೆ ಸ್ಮಶಾನಕ್ಕೆ ಕಾಯ್ದಿರಿಸಬೇಕು ಎಂದು ಕಂದಾಯ ಅಧಿಕಾರಿ ಸಂತೋಷ್ ಅವರಿಗೆ ಸೂಚನೆ ನೀಡಿದರು.
ಮೈಸೂರು ಕೊಡಗು ಗಡಿಭಾಗದ ಪ್ರವೇಶದ್ವಾರ ಬಳಿ ಡಿಜಿಟಲ್ ಶೈನ್ ಬೋರ್ಡ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಂದು ಲೀಟರ್ ಬಾಟಲ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಸಲಹೆ ನೀಡಿದರು.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷಿö್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಪುರಸಭೆ ಸದಸ್ಯರು ನಾಮ ನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.