ಮಡಿಕೇರಿ, ಜು. ೮: ಕೊಡಗು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಕಾನೂನು ಪದವೀಧರರಿಗೆ ೨೦೨೫-೨೬ನೇ ಸಾಲಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ತರಬೇತಿ ಪಡೆಯಲು ಅಭ್ಯರ್ಥಿಗಳು ವರ್ಗ- ೧ ಮತ್ತು ಪ್ರವರ್ಗ-೨ಎ, ೩ಎ, ೩ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರವರ್ಗ-೧ರ ಅಭ್ಯರ್ಥಿಗಳಿಗೆ ರೂ. ೩,೫೦,೦೦೦ ಹಾಗೂ ಪ್ರವರ್ಗ-೨ಎ, ೩ಎ, ೩ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ. ೨,೫೦,೦೦೦ ಒಳಪಟ್ಟಿರಬೇಕು.

ಪ್ರವರ್ಗ-೧ ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರವರ್ಗ-೧ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಲಯಮಾನುಸಾರ ಇತರೆ ವರ್ಗಗಳಲ್ಲಿ ಆಯ್ಕೆ ಮಾಡಲಾಗುವುದು.

ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದು ೨ ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರವರ್ಗ-೧ರ ಅಭ್ಯರ್ಥಿಗಳಿಗೆ ೪೦ ವರ್ಷದೊಳಗಿರಬೇಕು, ಪ್ರವರ್ಗ ೨ಎ, ೩ಎ, ೩ಬಿ ರ ಅಭ್ಯರ್ಥಿಗಳಿಗೆ ೩೮ ವರ್ಷದೊಳಗಿರಬೇಕು. ಅಭ್ಯರ್ಥಿಯು ತನ್ನ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರಬೇಕು. ಕಾನೂನು ತರಬೇತಿಯು ೪ ವರ್ಷಗಳ ಅವಧಿಯಾಗಿದ್ದು ಮಾಸಿಕ ರೂ. ೪ ಸಾವಿರದಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯಿಂದ ಹಿಂದುಳಿದ ವರ್ಗಗಳ ೧೦ ಅಭ್ಯರ್ಥಿಗಳಿಗೆ ನೀಡಲು ಅವಕಾಶವಿರುತ್ತದೆ.

ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ತಾ. ೨೪ ರೊಳಗೆ ಕಚೇರಿ ವೇಳೆಯಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಡಿಕೇರಿ. ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ ದೂರವಾಣಿ ಸಂಖ್ಯೆ : ೦೮೨೭೨-೨೯೫೬೨೮ ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕವಿತಾ ತಿಳಿಸಿದ್ದಾರೆ.