ಪೊನ್ನಂಪೇಟೆ, ಜು. ೮: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಚೀನಿವಾಡ ಎಂಬಲ್ಲಿ ಕಳೆದ ಎರಡು ವಾರಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟ ಮತ್ತು ಬಾಳೆ ತೋಟಗಳನ್ನು ಕಾಡಾನೆಗಳ ಹಿಂಡು ಧ್ವಂಸ ಮಾಡಿವೆ. ಕೃಷಿ ಫಸಲುಗಳನ್ನು ನಾಶಪಡಿಸಿವೆ. ೧೦ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಚೇನಿವಾಡ ಗ್ರಾಮದ ಮತ್ರಂಡ ಸುಕು ಬೋಪಣ್ಣ ಎಂಬುವವರ ಫಸಲುಭರಿತ ಬಾಳೆ ತೋಟಕ್ಕೆ ಲಗ್ಗೆಯಿಟ್ಟು ಧ್ವಂಸಗೊಳಿಸಿವೆ.

ಮತ್ರಂಡ ಸುಕು ಬೋಪಣ್ಣ ಅವರು ತಮ್ಮ ಲೈನ್ ಮನೆಯ ಹತ್ತಿರ ನಿಲ್ಲಿಸಿದ್ದ ಮಾರುತಿ ೮೦೦ ಕಾರನ್ನು ಸುಮಾರು ೫೦ ಅಡಿ ದೂರಕ್ಕೆ ತಳ್ಳಿಹಾಕಿರುವ ಕಾಡಾನೆಗಳ ಹಿಂಡು ಕಾರನ್ನು ಜಖಂಗೊಳಿಸಿವೆ. ಅಲ್ಲದೆ ಮತ್ರಂಡ ಕಾರ್ಯಪ್ಪ ಮತ್ತು ಸ್ಕಂದ ತಿಮ್ಮಯ್ಯ, ಎಂ. ಮೊಣ್ಣಪ್ಪ, ಸುಬ್ಬಯ್ಯ, ದಿಲ್ಲು, ರಾಧ ಎಂಬುವವರಿಗೆ ಸೇರಿದ ಕಾಫಿ, ಅಡಿಕೆ, ತೆಂಗು, ತೋಟಕ್ಕೆ ದಾಳಿ ಇಟ್ಟಿರುವ ಕಾಡಾನೆಗಳು ಫಸಲು ನಾಶಪಡಿಸಿವೆ.

ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿರುವ ಗ್ರಾಮಸ್ಥರು ಕಳೆದ ಹದಿನೈದು ದಿನಗಳಿಂದ ಬೇಗೂರು, ಚೀನಿವಾಡ ಗ್ರಾಮದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಗ್ರಾಮದ ಕೃಷಿ ಪ್ರದೇಶಗಳಲ್ಲಿ ದಾಂಧಲೆ ನಡೆಸುತ್ತಿವೆ. ಕಾಡಾನೆಗಳಿಂದ ಒಂದು ಕಡೆ ಕೃಷಿ ಫಸಲು ನಾಶವಾಗುತ್ತಿದ್ದರೆ, ಮತ್ತೊಂದೆಡೆ ಸಂಜೆ ವೇಳೆ ಗ್ರಾಮಸ್ಥರು ಮನೆಯಿಂದ ಹೊರಕ್ಕೆ ಬರಲು ಭಯಪಡುವಂತಾಗಿದೆ. ಕಾಡಾನೆಗಳ ದಾಳಿಯಿಂದಾಗಿ ಕೃಷಿ ಫಸಲಿಗಾದ ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ನಾಡಿನಿಂದ ಕಾಡಿಗೆ ಅಟ್ಟುವ ಮೂಲಕ ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಶೀಘ್ರದಲ್ಲೇ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಮತ್ರಂಡ ಸುಕು ಬೋಪಣ್ಣ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ಡಿಆರ್‌ಎಫ್‌ಓ ದಿವಾಕರ್ ಮತ್ತು ಆರ್‌ಆರ್‌ಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ. ಶಂಕರ್, ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮಳೆ ಕಡಿಮೆಯಾದ ಬಳಿಕ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.