ವೀರಾಜಪೇಟೆ, ಜು. ೮ : ಕೊಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಕಾರ್ಮಿಕನೋರ್ವನಿಗೆ ವೀರಾಜಪೇಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಘಟನೆಯ ವಿವರ : ಪೊನ್ನಂಪೇಟೆ ತಾಲೂಕು ಕುಟ್ಟ ಕೆ. ಬಾಡಗ ಗ್ರಾಮದ ಚೂರಿಕಾಡು ನಿವಾಸಿ ತಡಿಯಂಗಡ ಎಂ. ತಮ್ಮಯ್ಯ ಎಂಬವರ ಕಾಫಿ ತೋಟದ ಲೈನ್‌ಮನೆಯಲ್ಲಿ ಪಣಿ ಎರವರ ಬೊಳಕ, ಪತ್ನಿ ಬೋಳಚಿ, ರಘು ಮತ್ತು ಜೇನುಕುರುಬರ ಅಯ್ಯಪ್ಪ ಎಂಬ ಕಾರ್ಮಿಕರು ವಾಸವಿದ್ದರು. ತಾ. ೨೩/೦೩/೨೦೨೧ ರಂದು ತೋಟದ ಮಾಲೀಕರು ಲೈನ್‌ಮನೆಗೆ ತೆರಳಿ ಕಾರ್ಮಿಕರಿಗೆ ವಾರದ ಕೂಲಿ ಮುಂಗಡ ಹಣವನ್ನು ನೀಡಿದ್ದು, ಅಂದು ಕಾರ್ಮಿಕರಾದ ಬೊಳಕ, ರಘು ಮತ್ತು ಅಯ್ಯಪ್ಪ ಮೂವರು ತೋಟಕ್ಕೆ ಹೊಂದಿಕೊAಡಿರುವ ತೋಡಿನಲ್ಲಿ ಮೀನು ಹಿಡಿಯಲು ತೆರಳಿದ್ದರು. ಸಂಜೆಯವರೆಗೆ ಮೀನು ಹಿಡಿದು ಮನೆಗೆ ಮರಳಿದ್ದಾರೆ. ಬಳಿಕ ಮೀನು ಹಂಚಿಕೊಳ್ಳಲು ಮುಂದಾಗುತ್ತಾರೆ. ಈ ಸಂದರ್ಭ ಅಯ್ಯಪ್ಪ ತಗಾದೆ ತೆಗೆದಿದ್ದು, ಬೊಳಕ ಮತ್ತು ಅಯ್ಯಪ್ಪನ ನಡುವೆ ಜಗಳವಾಗಿ ಕೋಪಗೊಂಡ ಬೊಳಕ ಮನೆಯಲ್ಲಿದ್ದ ಕತ್ತಿಯಿಂದ ಅಯ್ಯಪ್ಪನ ಮೇಲೆ ಪ್ರಹಾರ ಮಾಡುತ್ತಾನೆ. ಪರಿಣಾಮ ಅಯ್ಯಪ್ಪನ ದೇಹವೆಲ್ಲ ರಕ್ತಸಿಕ್ತವಾಗಿ ನೆಲಕ್ಕೆ ಕುಸಿದು ಬೀಳುತ್ತಾನೆ. ಇದನ್ನು ಕಂಡ ಕಾರ್ಮಿಕ ರಘು ಈ ಬಗ್ಗೆ ಮಾಲೀಕರಿಗೆ ತಿಳಿಸುತ್ತಾನೆ. ಮಾಲೀಕರು ತಕ್ಷಣ ಅಯ್ಯಪ್ಪನನ್ನು ತಮ್ಮ ವಾಹನದಲ್ಲಿ ವೀರಾಜಪೇಟೆ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಅಯ್ಯಪ್ಪ ಸಾವನ್ನಪ್ಪುತ್ತಾನೆ. ಈ ಬಗ್ಗೆ ತೋಟದ ಮಾಲೀಕರು ನೀಡಿದ ದೂರನ್ನು ಸ್ವೀಕರಿಸಿದ ಕುಟ್ಟ ಪೊಲೀಸರು ತನಿಖೆ ನಡೆಸಿ ಪಣಿ ಎರವರ ಬೊಳಕನನ್ನು ಬಂಧಿಸುತ್ತಾರೆ. ತನಿಖೆ ನಡೆಸಿದ ಕುಟ್ಟ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜು ಅವರು ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಣಿ ಎರವರ ಬೊಳಕನಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೨೫,೦೦೦ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ಅವರು ವಾದ ಮಂಡಿಸಿರುತ್ತಾರೆ. -ಕಿಶೋರ್ ಕುಮಾರ್ ಶೆಟ್ಟಿ