ಸೋಮವಾರಪೇಟೆ, ಜು. ೮: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಇಂದು ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರವಾಸ ಮಾಡಿ, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿದರು.

ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಘೋಷಿಸಿದ ಅವರು, ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆ ಹಾಗೂ ಜಲಜೀವನ್ ಮಿಷನ್, ಅಮೃತ್ ಯೋಜನೆಯ ಪೂರ್ಣಕ್ಕೆ ವೇಗ ನೀಡಲಾಗಿದೆ ಎಂದರು. ಕಾರ್ಯಕರ್ತರ ಭೇಟಿ ಸಂದರ್ಭ ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಶ್ರಮ ವಹಿಸಬೇಕೆಂದು ಕರೆ ನೀಡಿದರು.

ಭಾರತೀಯ ಜನತಾ ಪಾರ್ಟಿಯಿಂದ ಶಕ್ತಿಕೇಂದ್ರಗಳ ಭೇಟಿ ಹಾಗೂ ಸ್ಥಳೀಯವಾಗಿ ಸಮಸ್ಯೆ ಬಗ್ಗೆ ತಿಳಿಯಲು ಹಾಗೂ ಪಕ್ಷದ ಸಂಘಟನಾತ್ಮಕ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಐಗೂರು, ಕಿರಗಂದೂರು, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಎಲ್ಲರನ್ನೂ ಭೇಟಿಯಾಗುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಸ್ಥಳೀಯವಾಗಿ ಕಾರ್ಯಕರ್ತರು, ರೈತರು ಹಾಗೂ ಕಾಫಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವುದಾಗಿ ತಿಳಿಸಿದರು.

ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದ್ದು ಪ್ರಧಾನಿ ಮೋದಿ ಅವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತದ ಸೇನೆ ಮತ್ತು ಸಂಸ್ಕೃತಿಯು ವಿಶ್ವ ಮಟ್ಟದಲ್ಲಿ ಗುರುತನ್ನು ಪಡೆಯುವಲ್ಲಿ ಮೋದಿಯವರು ಶ್ರಮಿಸಿದ್ದಾರೆ ಎಂದರು. ಕೇಂದ್ರದಲ್ಲಿ ಬಿಜೆಪಿಯ ಆಡಳಿತಕ್ಕೆ ೧೧ ವರ್ಷಗಳಾಗಿದ್ದು, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ರಾಷ್ಟಿçÃಯ ಹೆದ್ದಾರಿಗಳ ಕಾಮಗಾರಿ ವ್ಯಾಪಕವಾಗಿ ನಡೆಯುತ್ತಿದ್ದು, ಸಂಪರ್ಕ ವ್ಯವಸ್ಥೆಯೂ ಸುಧಾರಣೆಯಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಈ ಸರ್ಕಾರ ಅಧಿಕಾರಿಗಳಿಗೆ ದರ್ಪ ತೋರಿಸುವ ಕೆಲಸ ಮಾಡುತ್ತಿದೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಸಿ ಮತ್ತು ಡಿ ಆದೇಶವನ್ನು ಹಿಂಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ದಾಖಲಾತಿ ಕೊಡುವ ಕೆಲಸ ಮಾಡಿತ್ತು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಲ್ಲಾ ಜನಾಂಗವನ್ನು ಸಮಾನತೆಯಲ್ಲಿ ನೋಡುವ ಕೆಲಸ ಮಾಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಂದೇ ಜನಾಂಗವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂದು ಆರೋಪಿಸಿದರು. ನಮ್ಮ ಸರ್ಕಾರ ಬಂದಲ್ಲಿ ಮಾತ್ರ ರೈತರ ಏಳಿಗೆ ಮುಂದುವರೆಯುತ್ತದೆ ಎಂದರು. ಐಗೂರಿನ ಕಬ್ಬಿಣದ ಸೇತುವೆಯ ಭೂಮಿ ಪೂಜೆ ನಡೆದಿದ್ದು ಇನ್ನೂ ಕಾಮಗಾರಿ ಶುರುವಾಗಿಲ್ಲ.

ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರು ಶಾಸಕರೇ ಆಗಿದ್ದು ಇನ್ನು ಕೂಡ ಯಾವುದೇ ಸಭೆಯಾಗಿಲ್ಲ. ರೈತರಿಗೆ ಪಟ್ಟೆ ಕೊಡುವ ಕೆಲಸ ನಡೆದಿಲ್ಲವೆಂದು ದೂರಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಜನರಿಗೆ ತೊಂದರೆ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮಲೆನಾಡು ಭಾಗದ ಜನರ ಸಮಸ್ಯೆಗಳ ಬಗ್ಗೆ ಯಾವ ಶಾಸಕರೂ ಸಹ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ ಗಿಡದಲ್ಲಿ ಕೊಳೆರೋಗ ಉಂಟಾಗಿ ಬೆಳೆ ನಷ್ಟವಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಕೇಂದ್ರಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ರೈತರಿಗೆ ಒಂದಿಷ್ಟು ಅನುಕೂಲ ಆಗುತ್ತಿದೆ ಎಂದರು. ಇದೇ ಸಂದರ್ಭ ಸ್ಥಳೀಯವಾಗಿ ಇರುವ ನೆಟ್ವರ್ಕ್ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಸಿ ಮತ್ತು ಡಿ ಸಮಸ್ಯೆ ಹಾಗೂ ಕೆಲವು ರಸ್ತೆಗಳ ಸಮಸ್ಯೆ ಬಗ್ಗೆ ಸಂಸದರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

ಈ ಸಂದರ್ಭ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಸೋಮವಾರಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ,ಬಿ.ಬಿ. ಭಾರತೀಶ್, ವಿ.ಕೆ. ಲೋಕೇಶ್, ಬಿ.ಜೆ. ದೀಪಕ್, ಧರ್ಮಪ್ಪ, ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್, ಸೇರಿದಂತೆ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.