ಸೋಮವಾರಪೇಟೆ, ಜು. ೮: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ವಾಹನಗಳು, ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ಓಡಾಟಕ್ಕೆ ಸಮಸ್ಯೆಯಾಗಿದೆ.
ಸಾರ್ವಜನಿಕರು ತಮ್ಮ ವಾಹನಗಳನ್ನು ತಂದು ಆಸ್ಪತ್ರೆಯ ಪ್ರವೇಶ ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆಗೊಳಿಸುವುದು, ಮುಂಭಾಗದಲ್ಲಿಯೇ ವಾಹನUಳನ್ನು ನಿಲ್ಲಿಸಿ ಸಂತೆ ಸೇರಿದಂತೆ ಪಟ್ಟಣಕ್ಕೆ ತೆರಳುತ್ತಿರುವುದು ಮಾಮೂಲಾಗಿದೆ. ವಾರದ ಸಂತೆ ದಿನವಾದ ಸೋಮವಾರದಂದು ಆಸ್ಪತ್ರೆಯ ಆವರಣ ವಾಹನ ನಿಲುಗಡೆಯ ಸ್ಥಳವಾಗಿ ಮಾರ್ಪಡುತ್ತಿದೆ.
ಇದರಿಂದಾಗಿ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ವಾಹನಗಳು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ಆ್ಯಂಬ್ಯುಲೆನ್ಸ್ಗಳ ಓಡಾಟಕ್ಕೆ ತಡೆಯಾಗುತ್ತಿದೆ. ಇದರೊಂದಿಗೆ ವೈದ್ಯರುಗಳ ವಾಹನಗಳೂ ತೆರಳಲು ಸ್ಥಳಾವಕಾಶ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಹಿಂದೆ ಆಸ್ಪತ್ರೆಗೆ ಕಾವಲುಗಾರ, ಸೋಮವಾರದಂದು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ವಾಹನಗಳ ನಿಲುಗಡೆಗೆ ತಡೆಯೊಡ್ಡಲಾಗಿತ್ತು. ಇದೀಗ ಅಂತಹ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಕನಿಷ್ಟ ಸಂತೆ ದಿನವಾದರೂ ಓರ್ವ ಪೊಲೀಸ್ ಪೇದೆ ಅಥವಾ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಖಾಸಗಿ ವಾಹನಗಳ ನಿಲುಗಡೆಗೆ ತಡೆಯೊಡ್ಡಬೇಕೆಂದು ಒತ್ತಾಯಿಸಿದ್ದಾರೆ.