ನಾಪೋಕ್ಲು, ಜು. ೮: ಇಲ್ಲಿಗೆ ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ "ಚೈತನ್ಯ ಪಥ" ಮತ್ತು "ಯಶಸ್ಸಿನ ಸೂತ್ರ" ಶೀರ್ಷಿಕೆಯಡಿ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಬೆಂಗಳೂರಿನ ಕೊಡಗು ಗೌಡ ಸಮಾಜ ಪ್ರಾಯೋಜಿಸಿದ್ದ ಕಾರ್ಯಕ್ರಮದಲ್ಲಿ ಓಜಸ್ವಿ ಫೌಂಡೇಶನ್‌ನ ಟ್ರಸ್ಟಿಗಳಾದ ಡಾ. ಕವಿತಾ ಪಿ.ಸಿ. ಮತ್ತು ಬೆಂಗಳೂರಿನ ಜಸ್ಟೊçಬೊಟಿಕ್ಸ್ನ ಸಿಇಓ ಬ್ರಿಜೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಪಿಯುಸಿ ವಿದ್ಯಾರ್ಥಿಗಳಿಗೆ "ಯಶಸ್ಸಿನ ಸೂತ್ರ: ಗುರಿ ನಿಗದಿ, ಸಾಧನೆ, ಸಾರ್ಥಕತೆ" ಎಂಬ ವಿಷಯದಡಿ, ಗುರಿ ಸಾಧನೆಗೆ ಅಗತ್ಯವಿರುವ ಮನೋಬಲ, ಸಮಯ ನಿರ್ವಹಣೆ ಮತ್ತು ಸಕಾರಾತ್ಮಕ ದೃಷ್ಟಿಕೋನದ ಬಗ್ಗೆ ಮುಕ್ತ ಸಂವಾದ ನಡೆಸಲಾಯಿತು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಗಳಿಗೆ "ಚೈತನ್ಯ ಪಥ ಉದ್ದೇಶಪೂರ್ವಕ ಬದುಕು ಮತ್ತು ಆನಂದ" ಎಂಬ ವಿಷಯದ ಕುರಿತು ಪ್ರೇರಣಾತ್ಮಕ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುರಿಯ ಮಹತ್ವ, ಶಿಸ್ತಿನ ಅವಶ್ಯಕತೆ ಹಾಗೂ ಜೀವನದಲ್ಲಿ ಧ್ಯೇಯದೊಂದಿಗೆ ಸಾಗುವ ಕುರಿತು ಸವಿವರವಾಗಿ ತಿಳಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಹಾಗೂ ಕೊಡಗು ಗೌಡ ಸಮಾಜ, ಉಪಾಧ್ಯಕ್ಷ ಅಯ್ಯಟಿರ ಮನೋಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಸಂದೇಶ ನೀಡಿದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ದೇವಕ್ಕಿ ಪಿ.ಎಂ. ಹಾಗೂ ಮುಖ್ಯೋಪಾ ಧ್ಯಾಯಿನಿ ರಶ್ಮಿ ಎ.ಎಸ್. ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.