ವೀರಾಜಪೇಟೆ, ಜು. ೮: ವೀರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಮೂರ್ನಾಡು ವಲಯದ ಮೂರ್ನಾಡು ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಮೂರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ವಲಯ ಉಪ ಅರಣ್ಯ ಅಧಿಕಾರಿ ಭವ್ಯ, ಪರಿಸರ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಒಂದು ಗಿಡ ನಾಟಿ ಮಾಡುವುದರಿಂದ ನಾವು ನಮ್ಮ ಮುಂದಿನ ಪೀಳಿಗೆಗೆ ಉಡುಗೊರೆಯನ್ನು ನೀಡಿದಂತೆ ಹಾಗೂ ಇತ್ತೀಚಿನ ಸಂದರ್ಭದಲ್ಲಿ ಗುಡ್ಡ ಕುಸಿತ ಇತ್ಯಾದಿ ಹಾನಿಗಳನ್ನು ತಡೆಯುವುದಕ್ಕಾಗಿ ನಾವು ಮುಖ್ಯವಾಗಿ ಪರಿಸರ ಸಂರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿರುತ್ತದೆ ಎಂದು ಮಾಹಿತಿ ನೀಡಿದರು. ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾನ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಹಾಗೂ ಎಲೆಗಳನ್ನು ಗುರುತಿಸುವ ಸ್ಪರ್ಧೆಗಳನ್ನು ಮಾಡಿ ಬಹುಮಾನ ವಿತರಣೆ ಮಾಡಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ಆವಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳಿಂದ ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ್, ಸೇವಾ ಪ್ರತಿನಿಧಿ ದಿವ್ಯ, ವಲಯ ಮೇಲ್ವಿಚಾರಕ ಪ್ರತಾಪ್, ಶಾಲೆಯ ಶಿಕ್ಷಕ ವೃಂದದವರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ, ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.