ಮಡಿಕೇರಿ, ಜು. ೧೧: ಸಾಮಾಜಿಕ ಸೇವಾ ಸಂಸ್ಥೆಯಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರೋಟರಿ ಸಂಸ್ಥೆಯು ವಿನೂತನ ಸೇವಾ ಕಾರ್ಯಯೋಜನೆಗಳೊಂದಿಗೆ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರಬೇಕೆಂದು ರೋಟರಿ ಜಿಲ್ಲೆ ೩೧೮೧ ನ ಮಾಜಿ ಗವರ್ನರ್ ಹೆಚ್.ಆರ್. ಕೇಶವ್ ಕರೆ ನೀಡಿದ್ದಾರೆ.

ನಗರದ ಕೊಡವ ಸಮಾಜ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ನ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ರತ್ನಾಕರ್ ರೈ ಮತ್ತು ಕಾರ್ಯದರ್ಶಿಯಾಗಿ ಕ್ಯಾರಿ ಕಾರ್ಯಪ್ಪ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

‘ಒಳಿತಿಗಾಗಿ ಒಗ್ಗೂಡು’ ಎಂಬ ಸಂದೇಶದಡಿಯಲ್ಲಿ ಈ ವರ್ಷ ರೋಟರಿ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಪ್ರತೀ ರೋಟರಿ ಸಂಸ್ಥೆಯೂ ಹೊಸ ಚಿಂತನೆ ಅಳವಡಿಸಿಕೊಂಡು ಜನರ ಮನಸ್ಸಿನಲ್ಲಿ ಸದಾ ಸ್ಮರಣೀಯವಾಗುವಂತಹ ಕಾರ್ಯಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ನೀಡಿದ ಕೇಶವ್, ರೋಟರಿ ಸಂಸ್ಥೆಗಳು ನೀಡುವ ನೆರವಿನ ಯೋಜನೆಗಳು ಸಂತ್ರಸ್ತರಿಗೆ ದೊರಕುವಂತೆ ಗಮನ ಹರಿಸಬೇಕು. ಯಾವುದೇ ಯೋಜನೆ ಅಗತ್ಯವುಳ್ಳವರಿಗೆ ದೊರಕದೆ ವ್ಯರ್ಥವಾಗಬಾರದೆಂದು ನುಡಿದರು.

ಮಹಿಳೆಯರ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಗಮನ ನೀಡಬೇಕೆಂದು ಹೆಚ್.ಆರ್. ಕೇಶವ್ ಸೂಚಿಸಿದರು. ರೋಟರಿ ವಲಯ ೬ ರ ಸಹಾಯಕ ಗರ್ವನರ್ ಪಿ.ಎಂ. ದಿಲನ್ ಚಂಗಪ್ಪ ಅವರು ಪ್ರಮೋದ್ ರೈ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ, ಮಹಿಳಾ ಸ್ವಾವಲಂಭಿ ಯೋಜನೆ, ಅಂಗನವಾಡಿಗಳಿಗೆ ಕಾಯಕಲ್ಪ ಸೇರಿದಂತೆ ಈ ವರ್ಷದಲ್ಲಿ ೧೧ ಜಿಲ್ಲಾ ಯೋಜನೆಗಳನ್ನು ೮೬ ರೋಟರಿ ಸಂಸ್ಥೆಗಳು ರೋಟರಿ ಜಿಲ್ಲೆಯಾದ್ಯಂತ ಜಾರಿಗೊಳಿಸಲಿವೆ ಎಂದು ಮಾಹಿತಿ ನೀಡಿದರು.

ರೋಟರಿ ವಲಯ ಸೇನಾನಿ ಕೆ.ಸಿ. ಕಾರ್ಯಪ್ಪ ಮೇಕೇರಿ ಮತ್ತು ಅಪ್ಪಂಗಳ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮಡಿಕೇರಿಯ ಉದ್ಯಮಿ ಹರೀಶ್ ಕುಮಾರ್ ಸಹಯೋಗದಲ್ಲಿ ನೀಡಲಾದ ಆಟಿಕೆ, ಹಾಸಿಗೆ, ಕುರ್ಚಿ, ಕುಕ್ಕರ್, ತಟ್ಟೆಗಳು, ನೀರಿನ ಘಟಕಗಳನ್ನು ವಿತರಿಸಿದರು.

ರೋಟರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ೨೦ ವರ್ಷಗಳ ಇತಿಹಾಸ ಹೊಂದಿರುವ ಮಿಸ್ಟಿ ಹಿಲ್ಸ್ನಲ್ಲಿ ೬೫ ಸದಸ್ಯರಿದ್ದು, ಎಲ್ಲರ ಸಹಕಾರದೊಂದಿಗೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.

ರೋಟರಿ ನಿಕಟಪೂರ್ವ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ನಿಕಟಪೂರ್ವ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಹಾಜರಿದ್ದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಕ್ಯಾರಿ ಕಾರ್ಯಪ್ಪ ವಂದಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರಾದ ಬಿ.ಜಿ. ಅನಂತಶಯನ, ಎಚ್.ಟಿ. ಅನಿಲ್, ಎ.ಕೆ. ವಿನೋದ್, ಸತೀಶ್ ಸೋಮಣ್ಣ, ರಶ್ಮಿದೀಪಾ, ಡಾ. ಚೇತನ್, ಗಾನಾ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.