*ಗೋಣಿಕೊಪ್ಪ, ಜು. ೧೨: ಎರಡು ದಿನಗಳ ಕಾಲ ಹಮ್ಮಿಕೊಂಡ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದೆ. ಗುರುವಾರ ಮತ್ತು ಶುಕ್ರವಾರ ಮಾಯಮುಡಿ, ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಇಲಾಖೆ ಕೈಗೊಂಡಿತ್ತು.
ಮಾಯಮುಡಿ ಗ್ರಾಮದ ಅಂಬುಕೋಟೆಯಿAದ ೭ ಕಾಡಾನೆಗಳು ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ೨ ಗಂಡಾನೆಗಳನ್ನು ದೇವಮಚ್ಚಿಯ ಮಾವುಕಲ್ ಮೀಸಲು ಅರಣ್ಯಕ್ಕೆ ಅಟ್ಟಲಾಯಿತು.
ಅರುವತ್ತೊಕ್ಲು ಗ್ರಾಮದಲ್ಲಿ ಬೀಡುಬಿಟ್ಟಿದ್ದ ೯ ಕಾಡಾನೆಗಳನ್ನು ಕುಂಜುರಾಮನ ಕಟ್ಟೆ ಅರಿಕೇರಿ ಮೀಸಲು ಅರಣ್ಯಕ್ಕೆ ಅಟ್ಟಲಾಗಿದೆ.
ವೀರಾಜಪೇಟೆ ವಿಭಾಗ ಅರಣ್ಯ ಉಪಸಂರಕ್ಷಣಾಧಿಕಾರಿ ಎನ್. ಜಗನ್ನಾಥ್ ಮಾರ್ಗದರ್ಶನದಲ್ಲಿ ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ. ಗೋಪಾಲ್, ತಿತಿಮತಿ ಪ್ರಾದೇಶಿಕ ವಲಯ, ಆನೆಚೌಕೂರು ವನ್ಯಜೀವಿ ವಲಯ, ತಿತಿಮತಿ ಆನೆ ಕಾರ್ಯಪಡೆ, ಪೊನ್ನಂಪೇಟೆ ವಲಯ ಹಾಗೂ ಮಾಕುಟ್ಟ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.