ಮಡಿಕೇರಿ, ಜು. ೧೩: ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸ್ಥಾಪಕ ಸಂಪಾದಕ ಡಾ. ಕಲ್ಯಾಟಂಡ ಬಿ. ಗಣಪತಿ (೮೫) ಅವರು ತಾ. ೧೩ ರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಮೂಲತಃ ಕಕ್ಕಬ್ಬೆಯವರಾದ ಗಣಪತಿ ಅವರು ಮೈಸೂರಿನ ಲಲಿತಾದ್ರಿ ರಸ್ತೆಯ ಕೆ.ಸಿ. ಲೇಔಟ್‌ನಲ್ಲಿ ನೆಲೆಸಿದ್ದರು. ಹೃದಯಾಘಾತ ಕ್ಕೊಳಗಾದ ಗಣಪತಿ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ ರಾಲಿ ಗಣಪತಿ, ಪುತ್ರರಾದ ವಿಕ್ರಮ್ ಮುತ್ತಣ್ಣ, ಮಿಕಿ ಬೋಪಣ್ಣ ಅವರನ್ನು ಅಗಲಿದ್ದಾರೆ.
ಕೊಡಗಿನವರಾದ ಗಣಪತಿ ಅವರು ಕಾನೂನು ಪದವಿ ಪಡೆದು ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮುಂಬೈನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಮಾಡಿ, ಅಲ್ಲಿಯೇ ‘ಫ್ರೀ ಪ್ರೆಸ್ ಜನರಲ್', ‘ಇಪಿಡಬ್ಲ್ಯೂ' ಹಾಗೂ ‘ದಿ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪುಣೆಯಲ್ಲಿ ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ೭ ವರ್ಷ ಕೆಲಸ ಮಾಡಿ, ೧೯೭೮ರಲ್ಲಿ ಮೈಸೂರಿಗೆ ಮರಳಿದ ಅವರು, ಮೈಸೂರು ಮಿತ್ರ- ಸ್ಟಾರ್ ಆಫ್ ಮೈಸೂರು ಪತ್ರಿಕೆಗಳನ್ನು ಆರಂಭಿಸಿದರು.
ಪತ್ರಿಕೆಗಳಲ್ಲಿ ನಿರಂತರ ಅಂಕಣಗಳನ್ನು ಬರೆದಿದ್ದ ಅವರಿಗೆ ೨೦೦೧ರಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ೨೦೨೩ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಅವರು, ಆದರ್ಶವಾದಿ', ‘ದ ಕ್ರಾಸ್ ಆ್ಯಂಡ್ ದ ಕೂರ್ಗ್' ಕಾದಂಬರಿಗಳನ್ನು ಬರೆದಿದ್ದರು. ‘ಸ್ವಾರ್ಡ್ ಆಫ್ ಶಿವಾಜಿ', ‘ಶಿವಾಜಿಯ ಖಡ್ಗ' ಜೀವನ ಚರಿತ್ರೆಗಳು. 'ಅಮೆರಿಕ-ಆ್ಯನ್ ಏರಿಯಾ ಆಫ್ ಲೈಟ್' ಅವರ ಪ್ರವಾಸ ಕಥನ. ‘ಅಬ್ರಕಡಬ್ರಾ', ‘ಗಾಂಧೀಸ್ ಎಪಿಸ್ಟಲ್ ಟು ಒಬಾಮಾ' ಅವರ ಲೇಖನಗಳ ಸಂಗ್ರಹವಾಗಿವೆ. ಮೈಸೂರಿನ ಭಾರತೀಯ ವಿದ್ಯಾಭವನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಂತಾಪ: ಗಣಪತಿ ಅವರ ನಿಧನಕ್ಕೆ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕಂಬನಿ ಮಿಡಿದರು. ಸ್ವಗೃಹಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಕೊಡಗು ಪತ್ರಿಕಾ ಭವನ ಮ್ಯಾನೆಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್ ಎನ್.ಯು. ನಾಚಪ್ಪ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಸೇರಿದಂತೆ ಹಲವರು ಗಣಪತಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.